

ಮದ್ದೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತಾಲೂಕಿನ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಗೆ 4 ಕೋಟಿ ರೂ. ಅಧಿಕವಾಗಿ ಸಹಾಯ ಧನ ನೀಡಿರುವುದು ಪ್ರಶಂಸನೀಯ ಸಂಗತಿ ಎಂದು ತಾಲೂಕಿನ ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ನೀಲಕಂಠನಹಳ್ಳಿ ಬಸವೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಬುಧವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 1 ಲಕ್ಷ ರೂ. ಡಿಡಿಯನ್ನು ಟ್ರಸ್ಟ್ ಪದಾಧಿಕಾರಿಗಳಿಗೆ ವಿತರಣೆ ಮಾಡಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುವ ಪ್ರಗತಿಪರ ಕೆಲಸದಲ್ಲಿ ಸಮುದಾಯ ಅಭಿವೃದ್ಧಿಯ ಕಾರ್ಯಕ್ರಮದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ, ಹಾಲಿನ ಡೇರಿ ಕಟ್ಟಡದ ನಿರ್ಮಾಣ, ಶಾಲೆಯ ಕಾಂಪೌಂಡ್, ಶೌಚಾಗೃಹಗಳ ರಚನೆ, ಹಿಂದು ರುದ್ರಭೂಮಿಗೆ, ಸಮುದಾಯ ಭವನಗಳ ಕಟ್ಟಡ ಹೀಗೆ ಹಲವು ಸಮಾಜಮುಖಿ ಕಾರ್ಯಗಳಿಗೆ ಧರ್ಮಸ್ಥಳದಿಂದ ಸಹಾಯ ಧನವಾಗಿ ತಾಲೂಕಿಗೆ ಇದುವರೆಗೆ 4 ಕೋಟಿ ರೂ.ಗೂ ಮೀರಿ ಡಾ.ವೀರೇಂದ್ರ ಹೆಗ್ಗೆಡೆ ಅವರು ನೀಡಿರುವುದು ವಿಶೇಷವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಬಸವರಾಜು, ಗ್ರಾಪಂ ಅಧ್ಯಕ್ಷೆ ತಾಯಮ್ಮ, ಒಕ್ಕೂಟದ ಅಧ್ಯಕ್ಷೆ ಭಾಗ್ಯಾ, ಮೇಲ್ವಿಚಾರಕಿ ಚೈತ್ರಾ, ಸೇವಾ ಪ್ರತಿನಿಧಿ ಶಾರದಮ್ಮ, ಭವ್ಯಾ, ಇಂದ್ರ, ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳಾದ ಬಸವರಾಜು, ಸುರೇಶ್, ನಾಗರಾಜು, ಶಿವಣ್ಣ, ಚಿಕ್ಕಮೊಗ, ಮಹೇಶ್, ಬಸವರಾಜು ಇದ್ದರು.