

ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ ವೈದ್ಯರು ರಸ್ತೆಬದಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಕರುಣಾಜನಕ ಸನ್ನಿವೇಶ ಸೃಷ್ಟಿಯಾಗಿತ್ತು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಅಗ್ನಿಶಾಮಕ ಠಾಣೆ ಬಳಿ ಈ ಕೃತ್ಯ ನಡೆದಿದ್ದು, ಖಾಸಗಿ ಆಸ್ಪತ್ರೆಯ ಡಾ.ದೀಪಕ್ ಎಂಬವರು ಗಾಯಾಳು. ಇವರು ಕ್ಲಿನಿಕ್ನಿಂದ ಮನೆಗೆ ಸೈಕಲ್ನಲ್ಲಿ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಮಚ್ಚಿನಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅವರನ್ನು ಅಲ್ಲೇ ರಸ್ತೆ ಬದಿ ತಳ್ಳಿ ಹೋಗಿದ್ದರು.
ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ಠಾಣೆಗೆ ಸಮೀಪದಲ್ಲೇ ಈ ಘಟನೆ ನಡೆದಿದ್ದು, ಹಲ್ಲೆಗೆ ಕಾರಣ ಏನು ಎಂದು ನಿಖರವಾಗಿ ತಿಳಿದುಬಂದಿಲ್ಲ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವೈದ್ಯರನ್ನು ಸಾರ್ವಜನಿಕರು ರಕ್ಷಿಸಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತರೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.