

ಉಡುಪಿ: ದೊಡ್ಡ ನಗರಗಳಲ್ಲಿ ನಡೆಯುವಂಥ ಹಫ್ತಾ ವಸೂಲಿ ಇದೀಗ ಸಣ್ಣ ಪಟ್ಟಣಗಳಿಗೂ ಕಾಲಿಟ್ಟಿದ್ದು, ಬಾರ್ವೊಂದರಲ್ಲಿ ಹಫ್ತಾ ನೀಡದ್ದಕ್ಕೆ ಮ್ಯಾನೇಜರ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಬೈಂದೂರು ಸಮೀಪದ ಶಿರೂರಿನ ನೀರ್ಗದ್ದೆಯ ಸಿಲ್ವರ್ ಆರ್ಚ್ ಫ್ಯಾಮಿಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ನ ಮ್ಯಾನೇಜರ್ ಅಶ್ವಿಜ್ ಶೆಟ್ಟಿ ಹಲ್ಲೆಗೀಡಾದ ವ್ಯಕ್ತಿ. ಇವರ ಮೇಲೆ ಸ್ಥಳೀಯರಾದ ಕಿರಣ್ ಪೂಜಾರಿ ಮತ್ತು ಅಶೋಕ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಫ್ತಾ ನೀಡುವಂತೆ ಬಾರ್ ಮ್ಯಾನೇಜರ್ಗೆ ಬೆದರಿಕೆ ಒಡ್ಡಿದ ಆರೋಪಿಗಳು ಬಳಿಕ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮ್ಯಾನೇಜರ್ ರಕ್ಷಣೆಗೆ ಧಾವಿಸಿದ ಅಣ್ಣಪ್ಪ ಶೆಟ್ಟಿ, ರವಿ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಅಕ್ಷಯ ಆಚಾರ್ಯ ಅವರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.