

ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಮಧ್ಯಾಹ್ನ ಜಗಳ ಬಿಡಿಸಲು ಹೋದ ಮೂವರು ಸಜಾ ಬಂಧಿಗಳಿಗೆ ಕೈದಿಯೊಬ್ಬ ಚಮಚದಿಂದ ಇರಿದು ಇರಿದು ಗಾಯಗೊಳಿಸಿದ್ದಾನೆ.
ಉಡುಪಿ ಮೂಲದ ಪ್ರಶಾಂತ್ ಎಂಬಾತ ಕೃತ್ಯವೆಸಗಿದವ. ಚಿಕ್ಕಮಗಳೂರಿನ ಬೆನಕಶೆಟ್ಟಿ, ಶಿವಮೊಗ್ಗದ ದೇವೇಂದ್ರಪ್ಪ ಮತ್ತು ಮಲ್ಲೇಶಪ್ಪ ಗಾಯಗೊಂಡ ಕೈದಿಗಳು. ಮೂವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಡಿಯುವ ನೀರಿನ ವಿಚಾರದಲ್ಲಿ ಪ್ರಶಾಂತ್ ಮತ್ತೊಬ್ಬ ಕೈದಿಯೊಂದಿಗೆ ಜಗಳ ಮಾಡುತ್ತಿದ್ದ. ಈ ವೇಳೆ ಜಗಳ ಮಾಡದಂತೆ ಬುದ್ದಿವಾದ ಹೇಳಿದ್ದಕ್ಕೆ ಮೂವರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ನ್ಯಾಯಾಧೀಶರನ್ನು ನಿಂದಿಸಿ ಜೈಲು ಪಾಲಾಗಿದ್ದ ಪ್ರಶಾಂತ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.