

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಾನೆತ್ತರಕ್ಕೆ ಬೆಳೆದ ಶಿಖರಗಳು, ಹಿಮದಿಂದ ಕೂಡಿದ ಪ್ರದೇಶ, ದಟ್ಟಾರಣ್ಯ ಹೀಗೆ ಕಲ್ಲುಮುಳ್ಳುಗಳ ಹಾದಿಗಳನ್ನು ಸವಾಲಾಗಿಸಿಕೊಂಡು ಜಾಪಾನ್ನಲ್ಲಿ ನಡೆದ ಜೂ.27ರಂದು "ಡೀಪ್ ಜಪಾನ್ ಅಲ್ಟ್ರಾ&100' ಟ್ರಯಲ್ ರೇಸ್ನಲ್ಲಿ ಬೆಂಗಳೂರಿನ(ಸಾಗರ ಮೂಲದ) ಅಲ್ಟ್ರಾ ಮ್ಯಾರಥಾನ್ ಓಟಗಾರ್ತಿ ಅಶ್ವಿನಿ ಗಣಪತಿ ಅದ್ವೀತಿಯ ಸಾಧನೆ ಮಾಡಿದ್ದು, ಪುರುಷರು ಹಾಗೂ ಮಹಿಳೆಯರು ಭಾಗವಹಿಸಿದ ಈ ಸ್ಪರ್ಧೆಯ ಗುರಿ ತಲುಪಿದ ಜಪಾನೀಸ್ ಅಲ್ಲದ ಏಕೈಕ ಸ್ಪರ್ಧಿ, ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ.
ಎರಡು ದಿನ ರಾತ್ರಿ ನಿದ್ರೆ ಇಲ್ಲದೆ, 173 ಕಿಮೀ ಅನ್ನು 45 ಗಂಟೆ 42 ನಿಮಿಷದಲ್ಲಿ ಓಡಿ ತಲುಪುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದು, ಅದರಲ್ಲಿ 9000 ಮೀಟರ್ ಎತ್ತರದ (ಎವರೆಸ್ಟ್ ಎತ್ತರಕ್ಕಿಂತ ಹೆಚ್ಚು) ಪ್ರದೇಶಗಳಿರುವುದು ಇವರು, ಎದುರಿಸಿದ ಸವಾಲುಗಳ ಭೀಕರತೆಯನ್ನು ಬಿಂಬಿಸುತ್ತದೆ. ತಮ್ಮ ಸಾಧನೆಯ ಕುರಿತು ಅನುಭವಗಳನ್ನು ವಿಜಯವಾಣಿಯೊಂದಿಗೆ ಹಂಚಿಕೊಂಡ ಅಶ್ವಿನಿ ಗಣಪತಿ, ತನ್ನೆಲ್ಲ ಸಾಧನೆಗಳಿಗೆ ಬೆನ್ನೆಲುಬಾಗಿ ನಿಂತಿದ್ದು ತನ್ನ ಪತಿ ಸಂದೀಪ್ ಸತ್ಯನಾರಾಯಣ್ ಎಂದು ಹೆಮ್ಮೆಯಿಂದ ಹೇಳಿಕೊಂಡರು.
ಮೊದಲ ಬಾರಿಗೆ ಈ ರೀತಿ 100 ಮೈಲಿ ಸಾಧನೆಯನ್ನು ಮಾಡಿದ್ದು, ನಾನು ಅಂದುಕೊಂಡದ್ದಕ್ಕಿಂತ ಸವಾಲುಗಳು ತುಂಬಾ ಅಧಿಕವಾಗಿತ್ತು. ಶಿಖರಗಳು, ಒಂದು ಕಿಮೀ ವರೆಗೆ ಇದ್ದ ಹಿಮದ ತೇಪೆಗಳು, ಮಧ್ಯೆ ಸಿಗುವ ನದಿ, ಕಾಡಿನ ಹಾದಿಯಲ್ಲಿ ಕರಡಿ ಕಾಟ, ಮುಖ್ಯವಾಗಿ ಬ್ಯಾಗ್ ಅಥವಾ ವೆಸ್ಟ್ನಲ್ಲಿ ಬಹಳಷ್ಟು ಕಡ್ಡಾಯ ವಸ್ತುಗಳನ್ನು ಸಾಗಿಸುವ ಅಗತ್ಯವಾಗಿತ್ತು. ಅದು ನೀರಿಲ್ಲದೆ 6 ಕೆಜಿಗಿಂತ ಹೆಚ್ಚು ತೂಕವಿತ್ತು. ಆಹಾರದ ವಿಷಯದಲ್ಲಿ ನಾನು ಸಸ್ಯಹಾರಿ ಆದ್ದರಿಂದ ಸವಾಲುಗಳು ದುಪ್ಪಟ್ಟಾಗಿತ್ತು. ಹೀಗೆ ಸವಾಲುಗಳ ಪಟ್ಟಿ ಹೆಚ್ಚುತ್ತಾ ಹೋಗುತ್ತದೆ. 45 ಗಂಟೆ 42 ನಿಮಿಷದ ಓಟದಲ್ಲಿ ಒಬ್ಬಂಟಿಯಾಗಿ ಸಂಚರಿಸಬೇಕಿದ್ದ ಸಂದರ್ಭಗಳು ಅನೇಕ ಬಾರಿ ಬಂದಿದ್ದು, ಅದರಲ್ಲಿ ಗರಿಷ್ಠ ಒಂದುವರೆ ಗಂಟೆ ವರೆಗೆ ಒಬ್ಬಂಟಿಯಾಗಿ ಓಡಿದ್ದೇನೆ. ಸ್ಪರ್ಧೆ ಪ್ರಾರಂಭವಾಗಿ ಮೊದಲ 15 ಕಿಮೀ ತನಕ ಏನು ಸಿಗಲ್ಲ. ಅಲ್ಲಿಯ ತನಕ ಬೇಕಿರುವ ನೀರು, ಆಹಾರ ಎಲ್ಲವೂ ಹೊತ್ತುಕೊಂಡೇ ಹೋಗಬೇಕು. ಮತ್ತೆ ಓಟದ ಉದ್ದಕ್ಕೂ ವಿವಿಧ ಚೆಕ್ಪೋಸ್ಟ್ಗಳಲ್ಲಿ ಮಧ್ಯಂತರ ಕಟ್ಆಫ್ಗಳು ಇರುತ್ತವೆ. ಆದರೆ, ಅಲ್ಲಿ ಓಟದ ಕೌಶಲಕ್ಕಿಂತ ಮಿಗಿಲಾಗಿ ಆ ಸವಾಲನ್ನು ಎದುರಿಸುವ ಧೈರ್ಯವೇ ಮುಖ್ಯವಾಗಿತ್ತು. ಯಾಕೆಂದರೆ ಕೆಲವು ಭಾಗದಲ್ಲಿ ಹಗ್ಗದ ಮೂಲಕ ಹತ್ತುವುದು, ಸರಪಳಿಗಳನ್ನು ಬಳಸಿಕೊಂಡು ಸಂಚರಿಸುವುದು, ಕಡಿದಾದ ಆರೋಹಣಗಳು ಮತ್ತು ಇಳಿಜಾರುಗಳನ್ನು ದಾಟಬೇಕಿತ್ತು. ಇದು ನನಗೆ ಹೊಸ ಅನುಭವವಾಗಿತ್ತು. ಬೇರೆ ಯಾವುದೇ ಟ್ರಯಲ್ ರನ್ಗಳಲ್ಲಿ ಇದನ್ನು ಎಂದಿಗೂ ಮಾಡಿರಲಿಲ್ಲ.
46 ಗಂಟೆಗಳ ಓಟ ಸುಲಭ ಅನಿಸಿದರು ಆ ಹಾದಿ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯಗಳನ್ನು ಪರೀಕ್ಷಿಸಲು ಸಾಕಾಗಿತ್ತು. ಕಷ್ಟದ ಪರಾಕಾಷ್ಠೆ ಎಷ್ಟಿತ್ತೆಂದರೆ ಕೆಲವೊಮ್ಮೆ ನಮ್ಮ ಕಣ್ಣಂಚಿನಲ್ಲಿ ನೀರು ಬಂದ ಕ್ಷಣಗಳೂ ಇದ್ದವು ಎಂದು ಅಶ್ವಿನಿಯವರು ತನ್ನ ವಿಶಿಷ್ಟ ಸಾಧನೆಯ ವಿಭಿನ್ನ ಅನುಭವ ಹಂಚಿಕೊಳ್ಳುತ್ತಾರೆ.
ಪೇಸರ್ ಬಳಸಿಲ್ಲ
ಇಂಥ ಸ್ಪರ್ಧೆಗಳಲ್ಲಿ 93 ಕಿಮೀ ಬಳಿಕ ಸ್ಪರ್ಧಾರ್ಥಿಗಳಿಗೆ ಪೇಸರ್ (ಸಹಾಯಕ ಓಟಗಾರ)ನನ್ನು ಜತೆ ಸೇರಿಸಿಕೊಳ್ಳುವ ಅವಕಾಶ ಇರುತ್ತದೆ. ಆದರೆ, ಓಟದಲ್ಲಿ 2ನೇ ಸ್ಥಾನ ಪಡೆದ ಓಟಗಾರ್ತಿ ಬಿಟ್ಟರೆ ಪೇಸರ್ ಅನ್ನು ಬಳಸದವರು ಅಶ್ವಿನಿ ಮಾತ್ರ ಎಂಬುದು ಇವರ ಹೆಗ್ಗಳಿಕೆ.
ಸಾಧನೆಯ ಹಾದಿ 135 ಓಟಗಾರರಲ್ಲಿ 63 ಮಂದಿ ಫಿನಿಷ್ ಮಾಡಿದ್ದು, ಅಶ್ವಿನಿ ಮಹಿಳೆಯರಲ್ಲಿ 10ನೇ ಸ್ಥಾನ ಪಡೆದು, ಅಗ್ರ 10 ಅಭಿನಂದನಾ ವೇದಿಕೆಯ ಭಾಗವಾಗಿದ್ದರು. ಇದು ಅಶ್ವಿನಿಯವರ 4ನೇ ಅಂತಾರಾಷ್ಟ್ರೀಯ ಈವೆಂಟ್ ಆಗಿದ್ದು, 12 ಗಂಟೆಗಳ ಸ್ಟೇಡಿಯಂ ರನ್ ಮತ್ತು ಬ್ಯಾಕ್ಯಾರ್ಡ್ ಅಲ್ಟ್ರಾ ಸ್ವರೂಪದಲ್ಲಿ 2 ರಾಷ್ಟ್ರೀಯ ಶ್ರೇಷ್ಠತೆಗಳನ್ನು ಹೊಂದಿರುವ ಸಾಧನೆ ಮಾಡಿದ ಅಲ್ಟ್ರಾರನ್ನರ್ ಆಗಿದ್ದಾರೆ. ಅವರು ಎರಡು 24 ಗಂಟೆಗಳ ಸ್ಟೇಡಿಯಂ ರನ್ಗಳನ್ನು ಓಡಿದ್ದು, ಟೀಮ್ ಇಂಡಿಯಾದ ಭಾಗವಾಗಿದ್ದರು. ಈ ಹಿಂದೆ ಮಲೇಷ್ಯಾ, ಇಂಡೋನೇಷ್ಯಾ, ದಣ ಕೊರಿಯಾದಲ್ಲಿ ನಡೆದ 100 ಕಿಮೀ ಟ್ರಯಲ್ ಈವೆಂಟ್ನಲ್ಲಿ ಭಾಗವಹಿಸಿದ್ದಾರೆ. ಅಕ್ಟೋಬರ್ 2024ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ 80 ಕಿ.ಮೀ ಏಷ್ಯಾ ಪೆಸಿಫಿಕ್ ಟ್ರಯಲ್ ಚಾಂಪಿಯನ್ಶಿಪ್ನಲ್ಲಿ ಭಾರತೀಯ ತಂಡದ ಭಾಗವಾಗಿದ್ದರು. ಇದು ಅಶ್ವಿನಿಯ ಚೊಚ್ಚಲ ಟ್ರಯಲ್ 100 ಮೈಲುಗಳು ಎಂಬುದು ಗಮನಾರ್ಹ.
ಜೀವನದಲ್ಲಿ ತಾಳ್ಮೆ ತುಂಬಾ ಮುಖ್ಯವಾಗಿದೆ. ನಾವು ಒಂದು ನಿಖರವಾದ ಗುರಿಯೊಂದಿಗೆ ನಿರಂತರ ಶ್ರಮ ಹಾಕುತ್ತಿದ್ದರೆ, ಅದಕ್ಕೆ ಪ್ರತಿಲ ಸಿಕ್ಕೇ ಸಿಗುತ್ತದೆ. ಸ್ವಲ್ಪ ತಡವಾದರೂ ಯಶಸ್ಸು ನಮ್ಮ ಪಾಲಾಗುವುದು ಖಚಿತ. ಹೆಣ್ಣುಮಕ್ಕಳು ಇಂಥ ಸಾಧನೆಗೆ ಕೈ ಹಾಕುವುದು ವಿರಳ. ಯಾವುದೇ ಸವಾಲನ್ನು ಧೈರ್ಯದಿಂದ ಎದುರಿಸಬೇಕೆಂದು ಚಿಕ್ಕದಿನಿಂದ ತಂದೆಯರು ನನಗೆ ಹೇಳುತ್ತಿದ್ದರು. ಅದೇ ನನಗೆ ಸ್ಫೂರ್ತಿಯಾಗಿತ್ತು. > ಅಶ್ವಿನಿ ಗಣಪತಿ, ಅಲ್ಟ್ರಾ ಮ್ಯಾರಥಾನ್ ಓಟಗಾರ್ತಿ, ಬೆಂಗಳೂರು