

ವಿರಾಜಪೇಟೆ: ಪಟ್ಟಣದ ತೆಲುಗರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ದಕ್ಷಿಣ ಮಾರಿಯಮ್ಮ ದೇವಸ್ಥಾನದಲ್ಲಿ ಆಷಾಢ ಮಾಸದ ಶುಕ್ರವಾರ ವಿಶೇಷ ಪೂಜಾ ಧಾರ್ಮಿಕ ಸೇವೆಗಳು ಜರುಗಿದವು. ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಿ ಅಭಿಷೇಕ, ಅಲಂಕಾರ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಪಂಚಾಮೃತಾಭಿಷೇಕ, ಅರ್ಚನೆ ಸೇವೆಗಳು ನಡೆದವು. ದೇವಸ್ಥಾನದ ಆವರಣದಲ್ಲಿರುವ ಶ್ರೀ ನಾಗ ಗುಡಿಯಲ್ಲಿಯೂ ಅಭಿಷೇಕ ಸೇವೆ, ವಿಶೇಷ ಪೂಜೆ, ಮಧ್ಯಾಹ್ನ ಮಹಾಪೂಜೆಯನ್ನು ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ.ಕೃಷ್ಣ, ಪ್ರಧಾನ ಅರ್ಚಕ ಹರೀಶ್, ಸಮಿತಿಯ ವೇಣು, ಮಂಜುನಾಥ್, ಟಿ.ಟಿ.ರವಿ, ಟಿ.ಡಿ.ಲೋಕೇಶ್, ಹರೀಶ್ ಇತರರು ಇದ್ದರು.