ಅಷಾಢ ಕೊನೇ ಶುಕ್ರವಾರ ದೇವಿ ದೇವಾಲಯಗಳಲ್ಲಿ ಭಕ್ತರ ಸಾಲು

Sudhee_18_Ashada_Maasa_Pooja_@_BSK_Temple (1)
Published on

ಬೆಂಗಳೂರು: ಆಷಾಢ ಮಾಸದ ಕೊನೇ ಶುಕ್ರವಾರ ಪ್ರಯುಕ್ತ ಬನಶಂಕರಿ, ರಾಜರಾಜೇಶ್ವರಿ, ಚೌಡೇಶ್ವರಿ ಸೇರಿ ನಗರದ ದೇವಿ ದೇವಾಲಯಗಳಲ್ಲಿ ಮುಂಜಾನೆಯಿಂದ ರಾತ್ರಿವರೆಗೂ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮುಂಜಾನೆ ಬನಶಂಕರಿ ದೇವಿಗೆ ಪಂಜಾಮೃತ ಅಭಿಷೇಕ, ರುದ್ರಾಭಿಷೇಕ, ಶ್ರೀ ಸೂಕ್ತ, ಪುರುಷ ಸೂಕ್ತ ಅಭಿಷೇಕ, ಅರಿಶಿನ ಅಭಿಷೇಕ, ಕುಂಕುಮ ಅಭಿಷೇಕ ಮಾಡಲಾಯಿತು. ಬಳಿಕ ದೇವಿಗೆ ಇದೇಮೊದಲ ಬಾರಿಗೆ 20 ಸಾವಿರಕ್ಕೂ ಅಧಿಕ ನಿಂಬೆ ಹಣ್ಣುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದ ರಾತ್ರಿವರೆಗೂ ಭಕ್ತರು ಸರತಿಯಲ್ಲಿ ಸಾಗಿ ದೇವರ ದರ್ಶನ ಪಡೆದರು. ಭಕ್ತರಿಗೆ ಎಂದಿನಂತೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು ಜತೆಗೆ ಕೊಬ್ಬರಿ ಮಿಠಾಯಿ ಹಾಗೂ ಬಾದೂಷ ವಿತರಿಸಲಾಯಿತು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬನಶಂಕರಿ ಅಮ್ಮನಿಗೆ ಹಾಗೂ ಶಾಂಕಾಂಬರಿ ದೇವರಿಗೆ ಭಕ್ತರು ನಿಂಬೆಹಣ್ಣಿನ ಹಾಗೂ ಬೆಲ್ಲದ ಆರತಿ ಬೆಳಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. 60 ಸಾವಿರಕ್ಕೂ ಅಧಿಕ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಆಷಾಢ ಮಾಸದಲ್ಲಿ ದೇವಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ವಿಜಯನಗರದ ನಿಮಿಷಾಂಬ ದೇವಿ, ಮಲ್ಲೇಶ್ವರದ ಸರ್ಕಲ್ ಮಾರಮ್ಮ ಹಾಗೂ ಗಂಗಮ್ಮ ದೇವಿ, ಮೆಜೆಸ್ಟಿಕ್‌ನ ಅಣ್ಣಮ್ಮ ದೇವಾಲಯ, ರಾಜರಾಜೇಶ್ವರಿನಗರದ ರಾಜರಾಜೇಶ್ವರಿ ದೇವಾಲಯ, ಸುಂಕದಕಟ್ಟೆಯ ಚೌಡೇಶ್ವರಿ ದೇವಾಲಯ, ಮಲ್ಲೇಶ್ವರದ ಕನ್ನಿಕಾಪರಮೇಶ್ವರಿ, ಕೆಂಪೇಗೌಡನಗರದ ಬಂಡೀಕಾಳಮ್ಮ, ಜಯನಗರದ ದುರ್ಗಾ ಪರಮೇಶ್ವರಿ ದೇವಾಲಯ ಸೇರಿ ವಿವಿಧ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆ. ಅಲಂಕಾರ ಮಾಡಲಾಗಿತ್ತು. ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net