

ಬೆಂಗಳೂರು: ಏಪ್ರಿಲ್ ತಿಂಗಳಿಂದ ಅನ್ವಯ ಆಗುವಂತೆ ಮಾಸಿಕ 10 ಸಾವಿರ ರೂ. ಗೌರವಧನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅಹೋರಾತ್ರಿ ಧರಣಿ ಆರಂಭಿಸಿದ್ದು, ಮಂಗಳವಾರ ಕೆಲಸಕ್ಕೆ ಗೈರಾಗಿ ನಗರದ ಸ್ವಾತಂತ್ರ್ಯ ಉದ್ಯಾನ ಸೇರಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಿದರು.
ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಸಾವಿರ ರೂ. ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕು ಎಂದು ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರು ಸರ್ಕಾರವನ್ನು ಆಗ್ರಹಿಸಿದರು. ಬಜೆಟ್‌ನಲ್ಲಿ ಬಿಸಿಯೂಟ ಕಾರ್ಯಕರ್ತರಿಗೆ ಹೆಚ್ಚಳ ಮಾಡಿದಂತೆ ಆಶಾ ಕಾರ್ಯಕರ್ತರಿಗೂ ಒಂದು ಸಾವಿರ ರೂ. ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ 27 ಸಾವಿರ ಮಂದಿಗೆ ಮಾತ್ರವೇ ಹೆಚ್ಚಳವಾಗಿದೆ. ಆದರೆ ಬಾಕಿ 15 ಸಾವಿರ ಮಂದಿಗೆ ಸಿಗುತ್ತಿಲ್ಲ. ಹಾಗಾಗಿ ಕೂಡಲೇ ಎಲ್ಲರಿಗೂ ಹೆಚ್ಚಳ ಮಾಡಿದ ಮೊತ್ತ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ನಗರದ ಆಶಾ ಕಾರ್ಯಕರ್ತರಿಗೆ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ಎರಡು ಸಾವಿರ ರೂ. ಗೌರವಧನ ಹೆಚ್ಚಿಸಬೇಕು. ಸೇವಾ ನಿವೃತ್ತಿ ಪಡೆಯುವವವರಿಗೆ ಪಶ್ಚಿಮಬಂಗಾಳ ಮಾದರಿಯಲ್ಲಿ ಐದು ಲಕ್ಷ ರೂ. ನೀಡಬೇಕು. ಅವೈಜ್ಞಾನಿಕವಾಗಿ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣೆ ಮೌಲ್ಯಮಾಪನ ಕೈ ಬಿಡಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ 2025ರಲ್ಲಿ ಹೆಚ್ಚಿಸಿದ ಆಶಾ ಪ್ರೋತ್ಸಾಹಧನವನ್ನು ರಾಜ್ಯದಲ್ಲಿಯೂ ಜಾರಿಗೊಳಿಸಬೇಕು. ತರ್ಕಬದ್ಧ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಿಸುವ ಜನಸಂಖ್ಯೆ ಮಿತಿ ಹೆಚ್ಚಿಸುವುದನ್ನು ಕೈಬಿಡಬೇಕು. ಯಾವುದೇ ಆಶಾ ಕಾರ್ಯಕರ್ತರನ್ನು ಕೆಲಸದಿಂದ ತೆಗೆಯಬಾರದು. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ. ಆಗಲೂ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸಂಘದ ರಾಜ್ಯಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಎಚ್ಚರಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಆರೋಗ್ಯಾಧಿಕಾರಿಗಳಿಗೆ ಸೂಚನೆ
ಆಶಾ ಕಾರ್ಯಕರ್ತೆಯರ ಆಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಯಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಸೂಚಿಸಿದ್ದಾರೆ.
ಧರಣಿ ನಡೆಯುವ ಮೂರು ದಿನಗಳು (ಆ.12ರಿಂದ 14) ಸೇವೆಗೆ ಗೈರಾಗುವ ಆಶಾ ಕಾರ್ಯಕರ್ತೆಯರ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆದು ಜಿಲ್ಲಾಮಟ್ಟದಲ್ಲಿ ಕ್ರೋಡೀಕರಿಸಿ ನಿತ್ಯ 3 ಗಂಟೆಯೊಳಗೆ ಆಯುಕ್ತಾಲಯಕ್ಕೆ ಸಲ್ಲಿಸಬೇಕು. ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಆರೋಗ್ಯ ನಿರೀಕ್ಷಣಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಆರೋಗ್ಯ ಸೇವೆಯಲ್ಲಿ ತೊಡಕಾಗದಂತೆ ಕ್ರಮ ವಹಿಸಬೇಕು. ಅಧಿಕಾರಿಗಳು, ಕಾಯಂ ಮತ್ತು ಗುತ್ತಿಗೆ ಸಿಬ್ಬಂದಿಗೆ ವೈದ್ಯಕೀಯ ತುರ್ತು ಹೊರತುಪಡಿಸಿ ಇತರೆ ರಜೆ ನಿರ್ಬಂಧಿಸಬೇಕು ಎಂದು ಹೇಳಿದ್ದಾರೆ.
ಕೋಟ್
ಆಶಾ ಕಾರ್ಯಕರ್ತರಿಗೆ ಮೇಲಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸದಂತೆ ನೋಟಿಸ್ ಜಾರಿ ಮಾಡಿದ್ದಾರೆ. ಆದಾಗಿಯೂ ಪ್ರತಿಭಟನೆ ಕೈಗೊಂಡಿದ್ದೇವೆ. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳ್ಳಲಿದೆ.
ಟಿ.ಸಿ. ರಮ್ಯಾ, ಉಪಾಧ್ಯಕ್ಷೆ , ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ