

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯಲ್ಲಿ ಶಿಕ್ಷಕರ ಬಳಿಕ ಇದೀಗ ಆಶಾ ಕಾರ್ಯಕರ್ತೆಯರೂ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆಯ ನಮೂನೆಯನ್ನು ವಿತರಿಸುವುದು ಸೇರಿ ಪೂರಕ ಕಾರ್ಯಗಳನ್ನು ಮಾಡಬೇಕು. ಅದಕ್ಕಾಗಿ 2 ಸಾವಿರ ರೂ. ಗೌರವ ಧನ ನಿಗದಿಗೊಳಿಸಲಾಗಿದೆ. ಆದರೆ ಈ ಕುರಿತು ಸರ್ಕಾರದಿಂದ ಈವರೆಗೂ ಅಧಿಕೃತ ಆದೇಶ ಹೊರಬಂದಿಲ್ಲ. ಜತೆಗೆ ಗ್ಯಾರಂಟಿ ಯೋಜನೆ ಸೇರಿ ಈ ಹಿಂದೆ ನಡೆಸಿದ ಸಮೀಕ್ಷೆಗಳ ಹಣವನ್ನೇ ಇನ್ನೂ ಪಾವತಿಸಿಲ್ಲ. ಹಾಗಾಗಿ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು ತಿಳಿಸಿದ್ದಾರೆ.
ಸಮೀಕ್ಷೆ ವೇಳೆ ಮನೆ ಮನೆಗೆ ತೆರಳಿ ನಮೂನೆ ವಿತರಿಸುವುದರ ಜತೆಗೆ, ಸಮೀಕ್ಷೆಯಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ನೀಡಲು ಕುಟುಂಬದ ಸದಸ್ಯರು ಮುಂಚಿತವಾಗಿ ತಯಾರಿರುವಂತೆ ನೋಡಿಕೊಳ್ಳಬೇಕು. ಅಗತ್ಯ ದಾಖಲಾತಿ ತೆಗೆದಿಟ್ಟುಕೊಳ್ಳಲು ಹೇಳಬೇಕು. ನಮೂನೆಗಳನ್ನು ಹಂಚಿರುವ ವಿವರಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್ಲೋಡ್ ಇನ್ನಿತರೆ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಲಾಗಿದೆ. ಆದರೆ ಸಮೀಕ್ಷೆ ಮಾಡುವಷ್ಟು ದಿನಗಳ ಕಾಲ, ನಿಯಮಿತ ಚಟುವಟಿಕೆ ಆಧಾರಿತ ಪ್ರೋತ್ಸಾಹಧನಕ್ಕೆ ಕುತ್ತು ಬರಲಿದೆ. ಅಲ್ಲದೆ ಸಮೀಕ್ಷೆಗಾಗಿ ಸ್ವಂತ ಹಣವನ್ನು ಖರ್ಚು ಮಾಡಿಕೊಂಡು ಬರಿಗೈಯಲ್ಲಿ ಮನೆಗೆ ತೆರಳಬೇಕಿದೆ ಎಂದು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಸಮೀಕ್ಷೆ ಕಾರ್ಯ ಹೆಚ್ಚುವರಿ ಕೆಲಸ ಆಗಿರುವುದರಿಂದ ಹೆಚ್ಚಿನ ಗೌರವಧನ ನೀಡುವುದು ಸೇರಿ ಬೇಡಿಕೆಗಳನ್ನು ಈಡೇರಿಸಬೇಕು. ಇದಕ್ಕೆ ಸರ್ಕಾರ ಒಪ್ಪಿದಲ್ಲಿ ಮಾತ್ರ ಸಮೀಕ್ಷೆಯ ಕೆಲಸಗಳಿಗೆ ಕೈಜೋಡಿಸಲಾಗುವುದು.
- ಡಿ. ನಾಗಲಕ್ಷ್ಮೀ, ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ