ಕನಸಾಗಿಯೇ ಉಳಿದ ಮಾರುಕಟ್ಟೆ

MARKET
ಕುಷ್ಟಗಿಯ ವಾರದ ಸಂತೆ ನಡೆಯುವ ಮಾರುಕಟ್ಟೆ ಪ್ರವೇಶಿಸುವ ರಸ್ತೆಯ ದುಸ್ಥಿತಿ.
Published on

ವಿಜಯವಾಣಿ ವಿಶೇಷ ಕುಷ್ಟಗಿ
ಪಟ್ಟಣದ ವಾರದ ಸಂತೆ ನಡೆಯುವ ಮಾರುಕಟ್ಟೆ ಮೂಲ ಸೌಕರ್ಯ ವಂಚಿತವಾಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ನೆಲದ ಮೇಲೆ ಕುಳಿತು ವ್ಯಾಪಾರ ಮಾಡುತ್ತಿದ್ದು, ಶೆಡ್ ವ್ಯವಸ್ಥೆಯೂ ಇಲ್ಲದೆ ಮಳೆ, ಗಾಳಿ ಲೆಕ್ಕಿಸದೆ ವಹಿವಾಟು ಮಾಡುತ್ತಿದ್ದಾರೆ.

ಪಟ್ಟಣದ ಜನಸಂಖ್ಯೆಯಂತೆ ಮಾರುಕಟ್ಟೆಗೆ ಬರುವ ಜನರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದೆ. ಮಾರುಕಟ್ಟೆ ಚಿತ್ರಣ ಮಾತ್ರ ಬದಲಾಗಿಲ್ಲ. ಅಲ್ಲಲ್ಲಿ ತಗಡಿನ ಶೆಡ್ ಅಳವಡಿಸಿಕೊಂಡು ತರಕಾರಿ, ದಿನಸಿ ಸೇರಿ ಅಗತ್ಯ ವಸ್ತುಗಳ ಮಾರಾಟ ಮಾಡಲಾಗುತ್ತಿದೆ. ದಿನದ ಹಾಗೂ ವಾರದ ನೆಲದ ಬಾಡಿಗೆ ಪಾವತಿಸುವ ವ್ಯಾಪಾರಿಗಳಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಪುರಸಭೆಯಿಂದ ಆಗದಿರುವುದು ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಅವ್ಯವಸ್ಥೆಯ ಆಗರ

ಮಾರುಕಟ್ಟೆಯಲ್ಲಿ ಸಿಸಿ ರಸ್ತೆಗಳು ಇಲ್ಲವಾಗಿದೆ. ಚರಂಡಿ ವ್ಯವಸ್ಥೆಯೂ ಇಲ್ಲವಾಗಿದೆ. ಶುದ್ಧ ಕುಡಿವ ನೀರು, ಮೂತ್ರಗೃಹ, ಶೌಚಗೃಹವೂ ಇಲ್ಲದೆ ವ್ಯಾಪಾರಿಗಳು ಪರದಾಡುತ್ತಿದ್ದಾರೆ. ತರಕಾರಿ ವ್ಯಾಪಾರಿಗಳು ಬಹುತೇಕ ಮಹಿಳೆಯರೇ ಇರುವುದರಿಂದ ನೈಸರ್ಗಿಕ ಕರೆ ಬಂದಾಗ ಪುರಸಭೆ ಪಕ್ಕದ ಶೌಚಗೃಹಕ್ಕೆ ತೆರಳುವ ಪರಿಸ್ಥಿತಿ ಇದೆ. ಮಾರುಕಟ್ಟೆಯಲ್ಲಿ ಕಸ ವಿಲೇವಾರಿಯೂ ವಾರಕ್ಕೊಮ್ಮೆ ನಡೆಯುತ್ತಿದ್ದು, ಉಳಿದ ದಿನ ಅಲ್ಲಲ್ಲಿ ಕೊಳೆತ ತರಕಾರಿಗಳ ರಾಶಿ ಕಂಡುಬರುತ್ತಿದೆ.

ಸುತ್ತಲಿನ ಅಂಗಡಿಕಾರರು ಹಾಗೂ ನಿವಾಸಿಗಳೂ ಸಹ ಕಸ ತಂದು ಹಾಕುವುದರಿಂದ ಕಸದ ಪ್ರಮಾಣ ಹೆಚ್ಚುತ್ತಿದೆ. ಮಾರುಕಟ್ಟೆಗೆ ಕಾಂಪೌಂಡ್ ವ್ಯವಸ್ಥೆಯೂ ಇಲ್ಲದೆ ಬಿಡಾಡಿ ದನಗಳ ಹಾಗೂ ಹಂದಿ ನಾಯಿಗಳ ಕಾಟ ಹೆಚ್ಚಿದೆ ಎಂದು ವ್ಯಾಪಾರಿಗಳು ಅಲವತ್ತುಕೊಳ್ಳುತ್ತಿದ್ದಾರೆ. ತರಕಾರಿ ಮಾರುಕಟ್ಟೆಗೆ ಹೊಂದಿಕೊಂಡೇ ಚಿಕನ್ ಸೆಂಟರ್‌ಗಳು ಇರುವುದರಿಂದ ಗ್ರಾಹಕರು ಮಾಂಸದ ತ್ಯಾಜ್ಯದ ಮಧ್ಯೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕನ್ ಸೆಂಟರ್‌ಗಳಿಂದ ಬೀದಿ ನಾಯಿಗಳು ಅಲ್ಲಿಯೇ ಬಿಡಾರ ಹೂಡುತ್ತಿವೆ. ಮಾಂಸದ ತುಣಿಕಿಗಾಗಿ ಕಚ್ಚಾಡುತ್ತ ರಸ್ತೆಗೆ ಬರುತ್ತಿರುವ ನಾಯಿಗಳು ಬೈಕ್ ಇನ್ನಿತರ ವಾಹನಗಳ ಓಡಾಟಕ್ಕೆ ಅಡ್ಡಿಯನ್ನುಂಟು ಮಾಡುತ್ತಿವೆ. ನಾಯಿಗಳು ಅಡ್ಡ ಬಂದು ಕೆಲ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಪ್ರಸಂಗಗಳೂ ನಡೆದಿವೆ. ಮಾರುಕಟ್ಟೆಯ ಮಟನ್ ಮಾರ್ಕೆಟ್ ಹಿಂಬದಿಯಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ನಿರುಪಯುಕ್ತವಾಗಿ ಪಾಳು ಬಿದ್ದಿವೆ.

ಪುರಸಭೆಯ ದಿವ್ಯ ನಿರ್ಲಕ್ಷ್ಯ

ಪುರಸಭೆ ಕಚೇರಿ ಎದುರಿಗೇ ಮಾರುಕಟ್ಟೆ ಇದೆ. ಮಾರುಕಟ್ಟೆಯ ಅವ್ಯವಸ್ಥೆ ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪಟ್ಟಣವಾಸಿಗಳು ದೂರುತ್ತಿದ್ದಾರೆ. 2009-10ನೇ ಸಾಲಿನ ಸಿಎಂಎಸ್‌ಎಂಟಿಡಿಪಿ ಅಡಿ ಪಟ್ಟಣದ ಮಾರುಕಟ್ಟೆ ಅಭಿವೃದ್ಧಿಗೆ 60ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಪೌರಾಡಳಿತ ನಿರ್ದೇಶನಾಲಯದಿಂದ 2011ರ ಮಾ.26ರರಂದು ತಾಂತ್ರಿಕ ಮಂಜೂರಾತಿ ದೊರೆತು ಆವಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿತ್ತು. ತರಕಾರಿ ಹೋಲ್ ಸೇಲ್ ಅಂಗಡಿಗಳಿಗೆ 15.47ಲಕ್ಷ ರೂ., ತರಕಾರಿ ವ್ಯಾಪಾರಿಗಳಿಗೆ ಶೆಡ್ ನಿರ್ಮಾಣಕ್ಕೆ 6.97ಲಕ್ಷ ರೂ., ತರಕಾರಿ ಸ್ಟಾಲ್‌ಗಳ ನಿರ್ಮಾಣಕ್ಕೆ 17.46ಲಕ್ಷ ರೂ.,ಕಾಂಪೌಂಡ್ ನಿರ್ಮಾಣಕ್ಕೆ 2.40ಲಕ್ಷ ರೂ. ಮೀಸಲಿಟ್ಟು ವಿವಿಧ ಕಾಮಗಾರಿ ಕೈಗೊಳ್ಳಬೇಕಿತ್ತು. ಜತೆಗೆ ಪುರಸಭೆಯಲ್ಲಿ ಮೀಸಲಿಟ್ಟ 30ಲಕ್ಷ ರೂ. ಎಂಟರ್ ಪ್ರೈಸಸ್ ಅನುದಾನವನ್ನೂ ಮಾರುಕಟ್ಟೆ ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ಸಭೆಯಲ್ಲಿ ಠರಾವು ಮಾಡಲಾಗಿತ್ತು. ಬಿಡುಗಡೆಯಾದ ಅನುದಾನವೆಲ್ಲ ಯೋಜಿತ ಕಾರ್ಯಕ್ಕೆ ಬಳಕೆಯಾಗದೇ ಸುಸಜ್ಜಿತ ಮಾರುಕಟ್ಟೆ ಕನಸು ಕನಸಾಗಿಯೇ ಉಳಿದಿದೆ.

ಕುಷ್ಟಗಿಯ ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಸಿಸಿ ರಸ್ತೆ, ಚರಂಡಿ, ವ್ಯಾಪಾರಿಗಳಿಗೆ ಶೆಡ್, ಸ್ಟಾಲ್‌ಗಳ ನಿರ್ಮಾಣವಾಗಬೇಕಿದೆ. ಕುಡಿವ ನೀರು, ಮೂತ್ರಗೃಹದ ವ್ಯವಸ್ಥೆಯಾಗಬೇಕಿದೆ. ಕಸ ವಿಲೇವಾರಿಯೂ ಸಮರ್ಪಕವಾಗಿ ನಡೆಯಬೇಕಿದೆ. ಮಾರುಕಟ್ಟೆ ಅಭಿವೃದ್ಧಿಗೆ ಪುರಸಭೆ ಮುಂದಾಗಬೇಕಿದೆ.


ಹುಲಗೇಶ ಹಕ್ಕಲ್
ವ್ಯಾಪಾರಿ, ಕುಷ್ಟಗಿ.

ಪ್ರಸಕ್ತ ಸಾಲಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆಯಾಗುತ್ತಿದ್ದಂತೆ ಗದಗ-ಬೆಟಗೇರಿಯಲ್ಲಿನ ಮಾರುಕಟ್ಟೆ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಮಾರುಕಟ್ಟೆಯಲ್ಲಿ ಕೆಲ ಮಳಿಗೆಗಳಿಗೆ ಟೆಂಡರ್ ಕರೆಯಬೇಕಿದೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.

ಧರಣೇಂದ್ರಕುಮಾರ್
ಪುರಸಭೆ ಮುಖ್ಯಾಧಿಕಾರಿ, ಕುಷ್ಟಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net