ಜಗತ್ತಿಗೆ ಶ್ರೇಷ್ಠ ಚಿಂತನೆ ಕೊಟ್ಟವರು ಆರ್ಯರು: ನಾ.ನಾಗರಾಜ್ ಅಭಿಮತ

arya
Published on

ಬೆಂಗಳೂರು: ಜಗತ್ತಿಗೆ ಶ್ರೇಷ್ಠ ಚಿಂತನೆಗಳನ್ನು ಕೊಟ್ಟವರು ಆರ್ಯರು. ಸಂಸ್ಕೃತಿ,ಮೌಲ್ಯ,ಆಚಾರ-ವಿಚಾರಗಳನ್ನು ಸಮಾಜಕ್ಕೆ ಪಸರಿಸುವ ಕಾರ್ಯವನ್ನು ಆರ್ಯ ಸಮಾಜ ಮಾಡುತ್ತಿದೆ ಎಂದು ವಿಕ್ರಮ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕ ನಾ. ನಾಗರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವೇಶ್ವರಯ್ಯಪುರದ ಆರ್ಯ ಸಮಾಜದ ಶ್ರದ್ಧಾನಂದ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಶ್ರಾವಣಿ ಪರ್ವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಹಾಗೂ ಆರ್ಯ ಸಮಾಜ, ಭಾರತೀಯ ಚಿಂತನೆಗಳನ್ನು ಬಿತ್ತುವ ಕಾರ್ಯ ಮಾಡುತ್ತಿವೆ. ಇವೆರಡು ಸಂಸ್ಥೆಗಳ ಉದ್ದೇಶ ಒಂದೇಯಾದರೂ ವಿಭಿನ್ನವಾಗಿ ಮಾಡುತ್ತಿದ್ದೇವೆ. ಅರ್ಯ ಸಮಾಜ ಸ್ಥಾಪಕ ದಯಾನಂದ ಸರಸ್ವತಿ, 19ನೇ ಶತಮಾನದ ಪ್ರಮುಖ ಸಮಾಜ ಸುಧಾರಕ. ತತ್ವಜ್ಞಾನಿ ಮತ್ತು ಧಾರ್ಮಿಕ ನಾಯಕರು. ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣವಾದಿ ನಾಯಕರಾಗಿದ್ದರು ಎಂದರು.

ದಯಾನಂದ ಸರಸ್ವತಿಯವರ ಆಶಯದ ದಿಕ್ಕಿನಲ್ಲಿ ನಾವೆಲ್ಲರೂ ಸಾಗುವ ಮೂಲಕ ‘ಸಮರ್ಥ ಭಾರತ’ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ. ಆರ್ಯರು ಹೊರಗಡೆಯಿಂದ ಬಂದವರು ಎನ್ನುತ್ತಿದ್ದರು. ಆದರೆ, ಅವರು ನಮ್ಮವರು. ಆರ್ಯರು ಅಂದರೆ ಶ್ರೇಷ್ಠರು. ನಮ್ಮ ಚಿಂತನೆಗಳು ಎಲ್ಲೆಡೆ ಪಸರಿಸುವಂತಾಗಬೇಕು. ‘ಶ್ರಾವಣಿ ಪರ್ವ’ದಂತಹ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು ಎಂದು ನಾ. ನಾಗರಾಜ್ ಹೇಳಿದರು. ಇದಕ್ಕೂ ಮುನ್ನ ವಿದ್ಯಾರ್ಥಿಗಳು, ವೇದ, ಮಂತ್ರ ಪಠಿಸಿದರು. ಆರ್ಯ ಸಮಾಜ ಉಪಾಧ್ಯಕ್ಷ ಡಿ. ಬಾಲಕೃಷ್ಣ ಆರ್ಯ, ಕಾರ್ಯದರ್ಶಿ ಬಾಲಜಿ ಮತ್ತಿತರರಿದ್ದರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ ಕುರಿತು ಆರ್ಯ ಸಮಾಜ ತಿಳಿಸಿಕೊಟ್ಟಿದೆ. ಶ್ರಾವಣ ಅಂದರೆ ಉಲ್ಲಾಸ, ಉತ್ಸಾಹದ ಪ್ರತೀಕ. ಆದರೆ, ನಮ್ಮ ಮನಸ್ಸಿಗೆ ಅಥವಾ ಹೃದಯಕ್ಕೆ ಶ್ರಾವಣ ಬಂದಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬದುಕಿನ ಮೌಲ್ಯಗಳು ನಶಿಸುತ್ತಿವೆ. ಬರೀ ದುಗಡ, ದುಮ್ಮಾನ, ಚಂಚಲತೆಯಿಂದಲೇ ಸಾಕಷ್ಟು ಜನರು ಬದುಕುತ್ತಿದ್ದಾರೆ. ಹಾಗಾಗಿ, ಬದುಕಿನ ದಿನಗಳಲ್ಲಿ ಏನು ಕಳೆದುಕೊಂಡಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಂಡು ಸಾರ್ಥಕ ಜೀವನ ನಡೆಸುವುದು ಅವಶ್ಯಕತೆ ಇದೆ.

| ರವೀಂದ್ರ ದೇಶಮುಖ್, ಸಹಾಯಕ ಸುದ್ದಿ ಸಂಪಾದಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net