ಶಾಸಕ ಅರುಣಕುಮಾರ ನಗರ ಪ್ರದಕ್ಷಿಣೆ

8-RNR-03
Published on

ರಾಣೆಬೆನ್ನೂರ: ನಗರದ ವಿವಿಧ ಬಡಾವಣೆಗಳಿಗೆ ಶಾಸಕ ಅರುಣಕುಮಾರ ಪೂಜಾರ ಬುಧವಾರ ಬೆಳ್ಳಂಬೆಳಗ್ಗೆ ಭೇಟಿ ನೀಡಿ ಚರಂಡಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಪರಿಶೀಲಿಸಿ, ನಗರಸಭೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ಇಲ್ಲಿಯ ಚೌಡೇಶ್ವರಿ ದೇವಸ್ಥಾನ, ಚೌಡೇಶ್ವರಿ ನಗರ, ಮಾರುತಿ ನಗರ, ಸಿದ್ಧೇಶ್ವರ ನಗರ ಹಾಗೂ ವಿವಿಧ ಬಡಾವಣೆಗಳಿಗೆ ಬೆಳಗ್ಗೆ 5 ಗಂಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಚೌಡೇಶ್ವರಿ ದೇವಿಯ ಜಾತ್ರೆ ಮುಂದಿನ ವಾರದಲ್ಲಿ ನಡೆಯಲಿದೆ. ದೇವಸ್ಥಾನದ ಸುತ್ತಲಿರುವ ರಾಜ ಕಾಲುವೆ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕಾಲುವೆ ಮೇಲ್ಭಾಗವನ್ನು ಮುಚ್ಚುವಂತೆ ಆಯುಕ್ತ ಡಾ. ಎನ್. ಮಹಾಂತೇಶ ಅವರಿಗೆ ಸೂಚಿಸಿದರು.

ನಗರದಲ್ಲಿ ಯಾವ ಚರಂಡಿಯೂ ಸ್ವಚ್ಛವಾಗಿಲ್ಲ. ತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇದನ್ನು ನೋಡಿದರೆ ಸಾರ್ವಜನಿಕರಿಂದ ನಮಗೆ ಬಂದಿರುವ ದೂರುಗಳು ನಿಜವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದರಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ ನಿಷ್ಕಾಳಜಿ ಕಂಡು ಬರುತ್ತದೆ. ಇಂಥ ಅಧಿಕಾರಿಗಳು ಇನ್ಮುಂದೆ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ವಚ್ಛತೆ ಕಾಪಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವ ಮೂಲೆಯಲ್ಲೂ ಕಸ ಕಂಡು ಬರಬಾರದು ಎಂದು ಸೂಚಿಸಿದರು.

ನಗರ ಘಟಕದ ತಾಲೂಕು ಅಧ್ಯಕ್ಷ ಚೋಳಪ್ಪ ಕಸವಾಳ ಹಾಗೂ ನಗರಸಭೆ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net