

ವಿರಾಜಪೇಟೆ: ಕೃತಕ ಬುದ್ಧಿಮತ್ತೆಯ ಕುರಿತು ಆಯೋಜಿಸಿರುವ ಪ್ರಾಯೋಗಿಕ ಕಾರ್ಯಾಗಾರ ದಂತವೈದ್ಯಕೀಯ ಕ್ಷೇತ್ರದಲ್ಲಿನ ವೈದ್ಯರಿಗೆ ಹಾಗೂ ಅಭ್ಯಾಸದಲ್ಲಿರುವವರಿಗೆ ಉಪಕಾರಿಯಾಗಿದೆ ಎಂದು ಭಾರತೀಯ ದಂತ ವೈದ್ಯಕೀಯ ಮಂಡಳಿಯ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಅನಿಲ್ ಕುಮಾರ್ ಚಾಂದನ ಹೇಳಿದರು.
ಅಂತಾರಾಷ್ಟ್ರೀಯ ದಂತ ಶಿಕ್ಷಣ ತಜ್ಞರ ಸಂಘ (ಡಿಇಎ) ಹಾಗೂ ವಿರಾಜಪೇಟೆಯ ಕೊಡಗೂ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಂತ ವಿಜ್ಞಾನ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಸಂಶೋಧನ ಜ್ಞಾನವನ್ನು ಹರಡಲು ಇಂತಹ ವೇದಿಕೆಗಳು ಸಹಕಾರಿ, ಕೃತಕ ಬುದ್ಧಿಮತ್ತೆ ಉಪಕರಣದಿಂದ ಚಿಕಿತ್ಸೆ ಪಡೆಯುವವರಿಗೆ ಕೂಡ ಉಪಕಾರಿಯಾಗಿದೆ ಎಂದರು.
ಕಾಲೇಜಿನ ಡೀನ್ ಸುನೀಲ್ ಮುದ್ದಯ್ಯ ಮಾತನಾಡಿ, ಸಂಸ್ಥೆಯ ಉನ್ನತಿಗೆ ವಿಕಸಿತ ಭಾರತದ ಪರಿಕಲ್ಪನೆ ಇರಬೇಕು. ನಾವು ಸದಾ ಪ್ರಗತಿಯತ್ತ ಗಮನ ಹರಿಸಬೇಕು. ಸಂಶೋಧನೆ ಮತ್ತು ನಾವಿನ್ಯತೆ ಯುವ ವೈದ್ಯರು ಮತ್ತು ವಿದ್ಯಾರ್ಥಿಗಳಿಗೆ ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ವೈದ್ಯಕೀಯ ಸಂಸ್ಥೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಆಯೋಜಿಸಲು ನಿರ್ಧರಿಸಿದೆ. ಈ ವಿಚಾರ ಸಂಕಿರಣವು ಭಾರತ ಮತ್ತು ದಕ್ಷಿಣ ಏಷ್ಯಾದಾದ್ಯಂತ 800 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೇಪರ್ ಮತ್ತು ಇ- ಪೋಸ್ಟರ್ ಪ್ರಸ್ತುತಿಗಳ ಆತಿಥ್ಯ ವಹಿಸುತ್ತದೆ ಎಂದರು.
ಸಭೆಯನ್ನು ಉದ್ದೇಶಿಸಿ ಮಲೇಷ್ಯಾದ ಎಂಎಎಚ್‌ಎಸ್‌ಎ ವಿಶ್ವವಿದ್ಯಾಲಯದ ದಂತ ವಿಭಾಗದ ಸ್ಥಾಪಕ ಡೀನ್ ಪ್ರೊ ಮೊಹಮ್ಮದ್ ಇಬ್ರಾಹಿಂ, ನವದೆಹಲಿ ಸೇನೆಯ ಆರ್ ಮತ್ತು ಆರ್ ಡೆಂಟಲ್ ಸೆಂಟರ್‌ನ ಕಮಾಡೆಂಟ್ ಮತ್ತು ಬ್ರಿಗೇಡಿಯರ್ ಎಸ್.ಎಸ್. ಚೋಪ್ರ ಮತ್ತು ಕಾಲೇಜಿನ ಸಲಹೆಗಾರರಾದ ಡಾ.ಅನೂಮೊಲ್ ಕಾಲ, ಪ್ರಾಂಶುಪಾಲ ಡಾ ಕೆ.ಸಿ. ಪೊನ್ನಪ್ಪ, ಉಪಪ್ರಾಂಶುಪಾಲ ಡಾ. ಜಿತೇಂದ್ರ ಜೈನ್ ಇದ್ದರು.