ಕಟ್ಟೆ ಚಿತ್ರ ನಯನ ಮನೋಹರ ಅಭಿವ್ಯಕ್ತ

joshi
Published on

ಡಾ.ಶಿವಾನಂದ ಬಂಟನೂರ ಮೆಚ್ಚುಗೆ | ಅಂಕುರ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕಲಾವಿದೆ ಕವಿತಾ ಕಟ್ಟೆಯವರ ವರ್ಣಚಿತ್ರಗಳಲ್ಲಿ ಗ್ರಾಮೀಣ ಸೊಗಡಿನ ಗಾಢ ಸ್ಪರ್ಶವಿದೆ. ಹಳ್ಳಿ ಜನಪದ ಕಲೆ, ಬದುಕು ಹಾಗೂ ನಿಸರ್ಗದ ಅವಿನಾಭಾವ ಸಂಬAಧಗಳನ್ನು ದೃಶ್ಯಭಾಷೆ ಮೂಲಕ ನಯನ ಮನೋಹರ ರೀತಿಯಲ್ಲಿ ಅಭಿವ್ಯಕ್ತಿಸಲಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕವಿತಾ ಕಟ್ಟೆಯವರ ನಮ್ಮೂರಿನ ಸಿರಿ ಶೀರ್ಷಿಕೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಅವರು, ಪೂರ್ವಜರು ಹಳ್ಳಿಗಾಡಿನಲ್ಲಿ ಸುಂದರವಾದ ಜನಪದ ಬದುಕು ಮತ್ತು ಕಲೆ ಹೇಗೆ ರೂಢಿಸಿಕೊಂಡಿದ್ದರು? ಆರೋಗ್ಯದಾಯಕವಾಗಿ ಹೇಗೆ ಜೀವಿಸಿದ್ದರು ಎಂಬುದನ್ನು ಇವರ ವರ್ಣಚಿತ್ರಗಳಲ್ಲಿ ದೃಶ್ಯಾತ್ಮಕವಾಗಿ ಕಾಣಬಹುದಾಗಿದೆ. ಹಳ್ಳಿಗಳ ದೃಶ್ಯ, ಸ್ಪರ್ಶ, ನಾದ, ಸ್ವಾದ, ವಾಸನೆ ಏಲ್ಲವೂ ಬಹಳ ಸ್ಪಷ್ಟವಾಗಿ ಚಿತ್ರಗಳಲ್ಲಿ ರೂಪ ತಳೆದಿವೆ ಎಂದರು.

ಈ ಕಲಾವಿದೆ ತನ್ನೆಲ್ಲ ಕಲಾಕೃತಿಗಳಲ್ಲಿ ಮಹಿಳೆಯನ್ನು ಒಂದು ವಿಶಿಷ್ಟ ಲಕ್ಷಣವಾಗಿ ಚಿತ್ರಿಸುತ್ತ ತಾನೇ ಎಲ್ಲವೂ ಆಗಿ ತಾನಿಲ್ಲವಾಗಿದ್ದಾರೆ. ಅಂತೆಯೇ ಇಲ್ಲಿನ ಅನೇಕ ಚಿತ್ರಗಳಲ್ಲಿ ಮಹಿಳೆ ಮರ, ಹೂವು, ಮಳೆ, ಕೊಡೆ, ಹೂದಾನಿಯಾಗಿದ್ದಾಳೆ ಮಾತ್ರವಲ್ಲ, ಮರವೂ, ಚಿಮಣಿಯೂ, ಅಡುಕಲ ಮಡಕೆಯೂ, ಕೌದಿಯೂ ಆಗಿದ್ದಾಳೆ. ಕೌದಿಯೊಳಗಿನ ಚಿತ್ತಾರವೂ ಆಗಿ ತಾಯಿ ತತ್ವ ಮತ್ತು ನಿಸರ್ಗ ತತ್ವಗಳೆರಡಕ್ಕೂ ನಿದರ್ಶನವಾಗಿದ್ದಾಳೆ ಎಂದು ವಿಶ್ಲೇಷಿಸಿದರು.

ಡಾ.ಅಶೋಕ ಶೆಟಕಾರ ಮಾತನಾಡಿ, ಗ್ರಾಮೀಣ ಪ್ರತಿಭೆ ಕವಿತಾ ಹಳ್ಳಿ ಜೀವನದ ಅನುಭವ ಮತ್ತು ಅಲ್ಲಿನ ಸುಂದರ ದೃಶ್ಯಗಳನ್ನೇ ತನ್ನ ಚಿತ್ರಗಳಲ್ಲಿ ಮೂಡಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎಚ್. ಬೆಳಮಗಿ ಮಾತನಾಡಿ, ನಿರಂತರ ಕಲಾಕೃತಿಗಳನ್ನು ರಚಿಸುವ ಮೂಲಕ ಕಲಾವಿದರಾಗಿ ಹೊರಹೊಮ್ಮಲು ಸಾಧ್ಯ. ಕವಿತಾ ನಮ್ಮ ಹೆಮ್ಮೆ, ಎಲ್ಲರಿಗೂ ಮಾದರಿ ಎಂದು ಕೊಂಡಾಡಿದರು.

ಮಂಗಳವಾರದವರೆಗೆ ಬೆಳಗ್ಗೆ ೧೦.೩೦ರಿಂದ ಸಂಜೆ ೫.೫೦ರವರೆಗೆ ಪ್ರದರ್ಶನವನ್ನು ಚಿತ್ರಕಲಾವಿದರು, ಕಲಾಸಕ್ತರು ವೀಕ್ಷಸಬಹುದು ಎಂದು ಹಿರಿಯ ಚಿತ್ರಕಲಾವಿದ ನಾರಾಯಣ ಜೋಶಿ ಹೇಳಿದರು.

ಪ್ರಕೃತಿಗೆ ಗ್ರಾಮ ಜೀವನ ಹತ್ತಿರ, ಪೂರಕ ಎಂಬುದನ್ನು ಕಲಾವಿದೆ ತಮ್ಮ ಕುಂಚದ ಮೂಲಕ ಅಭಿವ್ಯಕ್ತ ಪಡಿಸುವಲ್ಲಿ ಸಿದ್ಧಹಸ್ತರು. ಇವರ ಬಹುತೇಕ ವರ್ಣಚಿತ್ರಗಳು ಪ್ರಕೃತಿ ಪ್ರೇರಣೆ, ಅದರ ಜತೆಗಿನ ಅನುಸಂಧಾನ, ಆಕೃತಿಗಳ ಸಂಯೋಜನೆ ಸುಂದರ ವರ್ಣ ವಿನ್ಯಾಸಗಳಿಂದ ಗಮನ ಸೆಳೆಯುತ್ತವೆ ಎಂದು ಕಲಾವಿರ್ಮಶಕ ಎಂ. ಸಂಜೀವ ಅಭಿಪ್ರಾಯಪಟ್ಟರು.

ಕಾಲೇಜಿನ ನಿರ್ದೇಶಕಿ ನೀಲಮ್ಮ ಬೆಳಮಗಿ ಮಾತನಾಡಿದರು. ಕವಿತಾ ಕಟ್ಟೆ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಉಪ್ಪಿನ, ಬಸವರಾಜ ಜಾನೆ, ಮಂಜುಳಾ ಜಾನೆ, ಶಿವಾನಂದ ಕೊಪ್ಪದ, ಮಹ್ಮದ್ ಅಯಾಜುದ್ದೀನ್ ಪಟೇಲ್, ಸಂಗಯ್ಯ ಗಳ್ಳದಮಠ, ಗೋಪಿ ಕುಲಕರ್ಣಿ ಇತರರಿದ್ದರು. ಕಾವ್ಯಾ, ಗೌರಿ, ಸಾನ್ವಿ ಪ್ರಾರ್ಥಿಸಿದರು. ಚಿತ್ರಕಲಾವಿದ ಬಿ.ಎನ್. ಪಾಟೀಲ್ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net