

ಬೆಂಗಳೂರು : ಉತ್ತಮ ಮಾನಸಿಕ ಆರೋಗ್ಯ ಮತ್ತು ಸಂತೋಷದ ಪಯಣಕ್ಕಾಗಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ 87 ದೇಶಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು.
ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿ ಅವರ 68ನೇ ಹುಟ್ಟುಹಬ್ಬವನ್ನೂ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಗೀತ ಹಾಗೂ ಸಮುದಾಯದ ಸೇವೆ ಮಾಡುವ ಮೂಲಕ ಜನರು ತಮ್ಮ ಸಂತೋಷವನ್ನು ಹಂಚಿಕೊಂಡರು.
ಶ್ರೀ ಶ್ರೀ ರವಿಶಂಕರ ಗೂರೂಜಿ ಮಾತನಾಡಿ, ಜ್ಞಾನದಲ್ಲಿ ಮುಳುಗಿದ್ದಾಗ ಪ್ರತಿ ದಿನವೂ ಸಂತೋಷಮಯ ದಿನವೇ. ನಮ್ಮ ಜೀವನವು ಸೇವೆ, ಸತ್ಸಂಗ, ಸಾಧನಕ್ಕೆ ಮುಡುಪಾಗಿದ್ದಾಗ ಪ್ರತಿ ದಿನವೂ ಒಂದು ಸಂಭ್ರಮ ಆಗಿರುತ್ತದೆ ಎಂದ ಅವರು ಎಲ್ಲರೂ ಇತರರಲ್ಲಿ ಸಂತೋಷ ಉಂಟುಮಾಡುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಾನು ಇಲ್ಲಿ ಎಲ್ಲರಿಗೂ ಸಂತೋಷ ಉಂಟು ಮಾಡುತ್ತೇನೆ ಎಂಬ ಒಂದು ಆಲೋಚನೆಯೇ ಸಾಕು ಇದ್ದರೆ ಸಾಕು ದಾರಿ ತಾನಾಗಿಯೇ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಪ್ರಾಣಾಯಾಮ, ಯೋಗ ಮತ್ತು ಸುದರ್ಶನ ಕ್ರಿಯೆಗಳ ಅಭ್ಯಾಸದಿಂದ ನೋವು ಮತ್ತು ಒತ್ತಡ ರಹಿತರಾಗುವುದರ ಜೊತೆಗೆ ಮನಸ್ಸು ತಿಳಿಯಾಗಿಸಿಕೊಂಡರು. ಪರಿಸ್ಪರ ಸಂತೋಷ ಹಂಚಿಕೊಂಡರು ಎಂದು ಹರ್ಷ ವ್ಯಕ್ತಪಡಿಸಿದರು.
ಆರ್ಟ್ ಆಫ್ ಲಿವಿಂಗ್ ಶಾಲೆಗಳಿಂದ ಸಸಿಗಳನ್ನು ನೆಡಲಾಯಿತು. ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಮತ್ತು ಆಯುಷ್ ಹೋಮಗಳನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ವರ್ಚುಯ್ಯಲ್ ವೇದಿಕೆ ಮೂಲಕ ರಾಯ್ಪುರದ ಹೊಸ ಧ್ಯಾನ ಕೇಂದ್ರ ‘ಗ್ಯಾನ್ ಕ್ಷೇತ್ರ’ವನ್ನು ಗುರೂಜಿ ಉದ್ಘಾಟಿಸಿದರು.