

ಕೋಟ: ಜೀವನದಲ್ಲಿ ಎದುರಾಗುವ ಹಲವಾರು ಕಷ್ಟ-ನಷ್ಟ, ನೋವು ಮರೆಯಲು ಕಲೆ ಸಹಾಯಕವಾಗುತ್ತದೆ ಎಂದು ಕಾರ್ಕಡ ಹೊಸಹಿರಿಯ ಪ್ರಾಥಮಿಕ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕೆ.ವಿಶ್ವೇಶ್ವರ ಹೊಳ್ಳ ಹೇಳಿದರು.
ಕೋಟ ರಸರಂಗ ಕಾರ್ಕಡ ಶಾಲೆ ವಿದ್ಯಾರ್ಥಿಗಳಿಗಾಗಿ ಪ್ರಸ್ತುತಪಡಿಸಿದ ಯಕ್ಷಗಾನ ರಂಗಕಲೆಯಲ್ಲಿ ನವರಸಾಭಿನಯ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಶಿಕ್ಷಕ ಎನ್.ಪ್ರಭಾಕರ ಕಾಮತ್ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಕಲಿಕೆಗೆ ಪೂರಕವಾಗಿದ್ದು, ವಿದ್ಯಾರ್ಥಿಗಳಿಗೆ ನೀಡುವಲ್ಲಿ ನಮ್ಮ ಶಾಲೆ ಸದಾ ಮುಂಚೂಣಿಯಲ್ಲಿ ಇರುತ್ತದೆ ಎಂದರು.
ಕಸಾಪ ಬ್ರಹ್ಮಾವರ ಘಟಕ ಅಧ್ಯಕ್ಷ, ರಂಗಕರ್ಮಿ ರಾಮಚಂದ್ರ ಐತಾಳ ಏಕಪಾತ್ರಾಭಿನಯ ಮಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ತದನಂತರ ರಸರಂಗ ಕೋಟ ತಂಡದಿಂದ ಪ್ರಾತ್ಯಕ್ಷಿಕೆ ನಡೆಯಿತು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ಕಾರ್ಯಕ್ರಮ ನಿರೂಪಿಸಿದರು. ಪಾರ್ವತಿ ಮಯ್ಯ ವಂದಿಸಿದರು. ಕಲಾವಿದರಾಗಿ ಚಂದ್ರಯ್ಯ ಆಚಾರ್, ರಾಘವೇಂದ್ರ ಹೆಗಡೆ, ಭರತ್ ಚಂದನ್, ವಿಘ್ನೇಶ್, ಕಾರ್ತಿಕ್ ಸಹಕರಿಸಿದರು.