ಬೈಂದೂರು: ಉಪ್ಪುಂದ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ತಂತ್ರಿ ಶ್ರೀನಿವಾಸ ಅಡಿಗ ನೇತೃತ್ವದಲ್ಲಿ, ಉಪ್ಪುಂದ ನರೇಂದ್ರ ಅಡಿಗ ಯಜಮಾನಿಕೆಯಲ್ಲಿ ದೇವಳ ಪ್ರಧಾನ ಅರ್ಚಕ ಪ್ರಕಾಶ ಉಡುಪ ನೇತೃತ್ವದ ವೈದಿಕ ತಂಡದವರಿಂದ ಸಾಂಪ್ರದಾಯಿಕ ವಿಧಿ-ವಿಧಾನದ ಮೂಲಕ ಧ್ವಜ ಮರವನ್ನು ನೆಟ್ಟು ಅಂಕುರಾರ್ಪಣೆಯೊಂದಿಗೆ ಧ್ವಜಾರೋಹಣ ನೆರವೇರಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಎಸ್., ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಸದಸ್ಯರಾದ ನಾರಾಯಣ ಖಾರ್ವಿ, ರಾಮ ಎಸ್., ಲಲಿತಾ ಅರುಣ್‌ಕುಮಾರ್ ಶೆಟ್ಟಿ, ಅಂಬಿಕಾ ದೇವಾಡಿಗ, ರಾಜೇಶ ದೇವಾಡಿಗ, ಯು.ರವೀಂದ್ರ ಪ್ರಭು, ಜನಾರ್ದನ ಮಾಚ ಪೂಜಾರಿ, ಜಿಪಂ ಮಾಜಿ ಸದಸ್ಯ ಶಂಕರ ಪೂಜಾರಿ, ಸ್ಥಳೀಯ ಜನಪ್ರತಿನಿಧಿಗಳು, ದೇವಳದ ಸಿಬ್ಬಂದಿ, ಗ್ರಾಮಸ್ಥರು ಸೇರಿದ್ದರು.
ಧಾರ್ಮಿಕ ಕಾರ್ಯಕ್ರಮ
ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ, ವ್ಯೆಹ ದೇವನಾಂದಿ, ಪುಣ್ಯಾಹ, ಶುದ್ಧಕಲಶ, ಅದಿವಾಸ, ಅಸ್ತ್ರಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ವಿಶೇಷ ಬಲಿಪೂಜೆ ಬಳಿಕ ಅನ್ನಸಂತರ್ಪಣೆ ಜರುಗಿತು. ಸಂಜೆ ಯಾಗ ಶಾಲೆಯಲ್ಲಿ ವಾಸ್ತುಹವನ, ರಾಕ್ಷೋಘ್ನ ಹೋಮ, ಕಂಕಣಧಾರಣೆ, ರುಜ್ಜುಬಂಧನ ನಡೆಯಿತು. ನಂತರ ರಥಬೀದಿ ಕಟ್ಟೆ ಉತ್ಸವ ನಡೆಯಿತು.