ಕಲೆ, ಸಂಸ್ಕೃತಿ ಒಂದೇ ಬಳ್ಳಿಯ ಹೂವುಗಳು

WEB2
Published on

ಗ್ರಾಪಂ ಅಧ್ಯಕ್ಷೆ ಮಂಜುಳಾ ಭೀಮೇಶ್ ಅಭಿಪ್ರಾಯ ಇಡಗೂರಿನಲ್ಲಿ ದೇಸಿ ಸಾಂಸ್ಕೃತಿಕ ಸಂಭ್ರಮ

ಗೌರಿಬಿದನೂರು: ಪಾರಂಪರಿಕವಾಗಿ ಬೆಳೆದು ಬಂದ ಜನಪದ ಕಲೆ ಮತ್ತು ಸಂಸ್ಕೃತಿ ಅವನತಿಯಾದರೆ ನಾಡು ಸಾಂಸ್ಕೃತಿಕವಾಗಿ ಬಡವಾಗುತ್ತದೆ. ತನ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಸಿಯ ಕಲಾ ಪ್ರದರ್ಶನ ಆಯೋಜಿಸುವ ಅಗತ್ಯವಿದೆ ಎಂದು ಗ್ರಾಪಂ ಅಧ್ಯಕ್ಷೆ ಮಂಜುಳಾ ಭೀಮೇಶ್ ತಿಳಿಸಿದರು.

ತಾಲೂಕಿನ ಇಡಗೂರು ಗ್ರಾಮದ ರುದ್ರ ಕವಿ ರಂಗಮಂದಿರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಮದ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ದೇಸಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಾತ್ರೆ, ಉತ್ಸವಗಳಲ್ಲಿ ಗ್ರಾಮೀಣ ಕಲೆಗಳ ಪ್ರದರ್ಶನ ಹಮ್ಮಿಕೊಳ್ಳುವುದರಿಂದ ನವ ಪೀಳಿಗೆಯಲ್ಲೂ ಕಲೆಗಳ ಕುರಿತು ಆಸಕ್ತಿ, ಅರಿವು ಮೂಡುತ್ತದೆ. ಇದರಿಂದ ಕಲೆಯನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅನುಕೂಲವಾಗುತ್ತದೆ. ಸಾಂಸ್ಕೃತಿಕ ಸಂಘಟನೆಗಳು ಇಂತಹ ಕಾರ್ಯಗಳನ್ನು ಮಾಡಬೇಕು. ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಒಂದೇ ಬಳ್ಳಿಯ ಹೂವುಗಳಿದ್ದಂತೆ. ಈ ನಿಟ್ಟಿನಲ್ಲಿ ಸಮೃದ್ಧ ನಾಡು ಕಟ್ಟಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಜಿ.ಸೋಮಯ್ಯ ಮಾತನಾಡಿ, ಜನಪದ ಸಾಹಿತ್ಯ ಮತ್ತು ಕಲೆಗಳಲ್ಲಿ ಮಾನವನ ಜೀವನಕ್ಕೆ ಅಗತ್ಯವಿರುವ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಅದನ್ನು ಅರಿತು ಮುನ್ನಡೆದವನೇ ನಿಜ ಮಾನವನಾಗುತ್ತಾನೆ. ಜನಪದವು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜನಪದ ನಡೆದು ಬಂದ ದಾರಿ ಅನುಭವಗಳ ಸಂಕೋಲೆ ಎಂದರು.

ರಂಗ ಕಲಾವಿದ ಉಮಾಶಂಕರ್ ಮಾತನಾಡಿ, ಇಡಗೂರು ಗ್ರಾಮದಲ್ಲಿ ಮೊದಲಿನಿಂದಲೂ ಕಲೆ, ಸಂಸ್ಕೃತಿಗೆ ಅಗ್ರಸ್ಥಾನವಿದೆ. ಯುವ ಪೀಳಿಗೆಗೆ ದೇಶದ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಕಲಾವಿದೆ ದಿವ್ಯಾ ಶಿವನಾರಾಯಣ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಭಾರತೀಯ ಸಂಸ್ಕೃತಿಗೆ ಪೆಟ್ಟು ಬೀಳುತ್ತಿದೆ. ಇಂತಹ ವೇದಿಕೆಗಳ ಮೂಲಕ ಜೀವನ ಮೌಲ್ಯ ಮತ್ತು ಸಂಸ್ಕಾರ ಅಭಿವೃದ್ಧಿ ಸಾಧ್ಯ ಎಂದರು.

ಸೋಮನ ಕುಣಿತ, ಗಾರುಡಿಗೊಂಬೆ, ಕೊಂಬು ಕಹಳೆ, ಭರತನಾಟ್ಯ, ತಮಟೆ ಮತ್ತು ತಿಂಡಿಗೆ ಬಂದ ತುಂಡೇರಾಯ ನಾಟಕ ಇನ್ನು ಹಲವು ಕಾರ್ಯಕ್ರಮಗಳು ಜನರನ್ನು ರಂಜಿಸಿದವು.

ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಎನ್.ಪ್ರಸನ್ನ ಕುಮಾರ್, ಎಲ್.ನಾಗರಾಜು, ಗ್ರಂಥಪಾಲಕ ನಂಜುಂಡಪ್ಪ, ಗೌತಮ ಬುದ್ಧ ಸಂಸ್ಥೆ ಅಧ್ಯಕ್ಷ ವೈ.ಟಿ.ಪ್ರಸನ್ನ ಕುಮಾರ್, ಕಲಾವಿದರಾದ ಬಲರಾಮ, ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net