ದೇವಸ್ಥಾನದಲ್ಲಿ ಕಳವು ಮಾಡಿದ್ದ ಇಬ್ಬರು ಕಳ್ಳರ ಬಂಧನ

08M.D.R.6
Published on

ಮದ್ದೂರು: ಚುಂಚೇಗೌಡನದೊಡ್ಡಿ ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೆಸಗರಹಳ್ಳಿ ಪೊಲೀಸರು ಬಂಧಿಸಿದ್ದು, ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ 2 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.


ತಿ.ನರಸಿಪುರ ಮೂಲದ ಎನ್.ಮಹೇಶ, ಎಂ.ಗೋವಿಂದನಾಯಕ ಬಂಧಿತ ಆರೋಪಿಗಳು.
ದೇವರ ಬೆಳ್ಳಿಯ ಜೋಡಿ ಮುಖವಾಡ, ಚಿನ್ನದ ಕಾಸುಗಳು, ಚಿನ್ನದ ತಾಳಿಗಳು ಸೇರಿದಂತೆ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.


ಚುಂಚೇಗೌಡನದೊಡ್ಡಿ ಗ್ರಾಮದ ಬಿ.ಎಲ್.ನಾಗರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ತಿ.ನರಸೀಪುರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.


ಆರೋಪಿಗಳ ವಿರುದ್ಧ ಬೆಸಗರಹಳ್ಳಿ, ಬನ್ನೂರು, ಮಳವಳ್ಳಿ ಗ್ರಾಮಾಂತರ, ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಬಂಧಿತ ಆರೋಪಿಗಳಿಂದ ಕಳ್ಳತನವಾಗಿದ್ದ ಒಟ್ಟು 100 ಗ್ರಾಂ ಚಿನ್ನದ ಒಡವೆಗಳು, 4 ಕೆ.ಜಿ 100 ಗ್ರಾಂ ಬೆಳ್ಳಿಯ ವಸ್ತುಗಳು, 21 ಸಾವಿರ ರೂ. ನಗದು ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ್ದ ಒಂದು ಟಿವಿಎಸ್ ಎಕ್ಸ್ ಎಲ್ ಮೊಪೆಡ್, ಹೋಂಡಾ ಆಕ್ಟಿವಾ ಸ್ಕೂಟರ್ ಮತ್ತು ಒಂದು ಕಬ್ಬಿಣದ ಸ್ಕ್ರೂಡ್ರೈವರ್ ವಶಪಡಿಸಿಕೊಂಡಿದ್ದಾರೆ.


ಆರೋಪಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ.ತಿಮ್ಮಯ್ಯ ಮಳವಳ್ಳಿ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ, ಬೆಸಗರಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಮಲ್ಲಪ್ಪ ಸಂಗಪ್ಪ ಕುಂಬಾರ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net