ಕೊಲೆ ಮಾಡಿ ಶವ ಹೂತಿದ್ದವರ ಸೆರೆ

Published on

ಹಣ ಹಂಚಿಕೆ ವಿಷಯದಲ್ಲಿ ಜಗಳವಾಗಿ ಹತ್ಯೆ | ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ

ಚಿಕ್ಕಬಳ್ಳಾಪುರ : ಹಣದ ವಿಚಾರವಾಗಿ ಗೆಳೆಯನನ್ನು ಕೊಲೆಗೈದು, ಬಳಿಕ ಹೂತು ಹಾಕಿ ಪರಾರಿಯಾಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿಹಾರ ಮೂಲದ ರೆಹಾನ್ ಗುಡ್ಡು(27) ಕೊಲೆಯಾದವ. ಬಿಹಾರದ ಕೆಲಬಾಡಿ ಗ್ರಾಮದ ಸಾಜೀದ್ (35) ಮತ್ತು ಕುರ್ಸೆಲ್ ಗ್ರಾಮದ ಎಂ.ಡಿ.ಆಲಂ ತನ್ನು (35) ಬಂಧಿತರು. ತಾಲೂಕಿನ ತೌಡನಹಳ್ಳಿಯಲ್ಲಿ ಕೂಲಿ ಕೆಲಸಕ್ಕೆ ಮೂವರು ಬಂದಿದ್ದರು. ಇದರ ನಡುವೆ ರೆಹಾನ್ ಗುಡ್ಡು ನಾಪತ್ತೆಯಾಗಿದ್ದ. ಈ ಬಗ್ಗೆ ನಂದಿ ಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಹಿನ್ನೆಲೆ
ತೌಡನಹಳ್ಳಿಯಲ್ಲಿನ ಜ್ಞಾನೇಶ್ ಎಂಬುವವರ ಜಮೀನಿನಲ್ಲಿ ಆಯಿಲ್ ಮಿಲ್ ನಿರ್ಮಾಣದ ಗುತ್ತಿಗೆಯನ್ನು ಪಡೆದುಕೊಂಡಿದ್ದ ಬೊಮ್ಮನಹಳ್ಳಿಯ ಮಂಜುನಾಥ್, ಸೆಂಟ್ರಿಂಗ್ ಮೇಸಿ ಸೈಯದ್ ಬಾಬು ಮೂಲಕ ಬಿಹಾರದ ಕೂಲಿ ಕಾರ್ಮಿಕರಾದ ರೆಹಾನ್ ಗುಡ್ಡು, ಸಾಜೀದ್ ಮತ್ತು ಆಲಂರನ್ನು ಕರೆಸಿಕೊಂಡು, ಕಟ್ಟಡದ ಜಾಗದಲ್ಲಿದ್ದ ಶೆಡ್‌ನಲ್ಲಿರಿಸಿದ್ದರು. ಇದರ ನಡುವೆ ಸೆ.14ರಂದು ಕೆಲಸದ ಸ್ಥಳಕ್ಕೆ ಗುತ್ತಿಗೆದಾರರು ಬಂದಾಗ ಯಾರೂ ಇರಲಿಲ್ಲ. ಸಂಬಂಧಪಟ್ಟವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸಾಜೀದ್ ಮತ್ತು ಆಲಂ ಬಿಹಾರದಲ್ಲಿದ್ದು, ನಾಲ್ಕೈದು ದಿನಗಳಿಂದ ರೆಹಾನ್ ಗುಡ್ಡು ನಾಪತ್ತೆಯಾಗಿರುವುದು ಗೊತ್ತಾಗಿದೆ. ಕೊನೆಗೆ ಜತೆಯಲ್ಲಿದ್ದ ಆತನ ಗೆಳೆಯರನ್ನು ಕರೆದುಕೊಂಡು ಬಂದು ಪೊಲೀಸರು ವಿಚಾರಿಸಿದಾಗ ಕೊಲೆ ರಹಸ್ಯ ಬಯಲಿಗೆ ಬಂದಿದೆ.


ಕೂಲಿ ಹಣಕ್ಕಾಗಿ ಕೊಲೆ
ಈದ್‌ಮಿಲಾದ್ ಹಿನ್ನೆಲೆಯಲ್ಲಿ ಮೂವರು ಕೂಲಿ ಹಣವನ್ನು ಪಡೆದುಕೊಂಡಿದ್ದರು. ಇದೇ ವೇಳೆ ಹಂಚಿಕೆಯ ಲೆಕ್ಕದ ಬಗ್ಗೆ ರೆಹಾನ್ ಗುಡ್ಡು ಅಸಮಾಧಾನ ವ್ಯಕ್ತಪಡಿಸಿ, ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಆಲಂ ಮತ್ತು ಸಾಜೀದ್ ಸಿಮೆಂಟ್ ಹಾಲೋ ಬ್ರಿಕ್‌ನಿಂದ ತಲೆಗೆ ಹೊಡೆದಿದ್ದು, ಪ್ರಜ್ಞಾಹೀನನಾಗಿ ಬಿದ್ದ ಗುಡ್ಡುನನ್ನು ಜಮೀನಿನಲ್ಲಿನ ಗುಂಡಿಯಲ್ಲಿ ಹೂತು ಹಾಕಿ ಪರಾರಿಯಾಗಿದ್ದರು.


ಮರಣೋತ್ತರ ಪರೀಕ್ಷೆ
ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆರೋಪಿಗಳಿಬ್ಬರು ತೋರಿಸಿದ ಜಾಗದಲ್ಲಿ ಮಂಗಳವಾರ ಮಣ್ಣು ಅಗೆದು, ಮೃತದೇಹವನ್ನು ಹೊರ ತೆಗೆಯಲಾಯಿತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿಯಲ್ಲಿ ಬಿಹಾರದ ಕಾರ್ಮಿಕ ರೆಹಾನ್ ಗುಡ್ಡು ನಾಪತ್ತೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳು ಮಣ್ಣಿನಲ್ಲಿ ಹೂತಿಟ್ಟಿದ್ದ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಿದ್ದು ಇಬ್ಬರನ್ನು ಬಂಧಿಸಲಾಗಿದೆ.-ಕುಶಾಲ್ ಚೌಕ್ಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ

ಮೃತ ರಿಹಾನ್

ಸಾಜೀದ್ , ಎಂ.ಡಿ.ಆಲಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net