

ಭಟ್ಕಳ: ನಕಲಿ ನಿರಾಕ್ಷೇಪಣೆ ಪತ್ರ ನೀಡಿ ಮುಖ್ಯಾಧಿಕಾರಿಗಳ ಸಹಿಯನ್ನು ನಕಲು ಮಾಡಿದ ಆರೋಪದಲ್ಲಿ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ನೌಕರರೊಬ್ಬರನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜಾಲಿ ಪಟ್ಟಣ ಪಂಚಾಯಿತಿಯ ಇಸ್ಮಾಯಿಲ್ ಜಮಾಲ್ ದೊಡ್ಡಗುಬ್ಬಿ ಬಂಧಿತ ಆರೋಪಿ.
‘ಮಾರಾಟಕ್ಕಿದೆ ನಿರಾಕ್ಷೇಪಣೆ ಪತ್ರ!’ ಎನ್ನುವ ಶೀರ್ಷಿಕೆಯಲ್ಲಿ 2021ರ ಡಿ. 8ರಂದು ವಿಜಯವಾಣಿಯು ಜಾಲಿ ಪಟ್ಟಣ ಪಂಚಾಯಿತಿಯಲ್ಲಿನ ಅಕ್ರಮ ಬಯಲು ಮಾಡಿತ್ತು.
ಹಿಂದಿನ ಮುಖ್ಯಾಧಿಕಾರಿ ಅಜೇಯ ಭಂಡಾರಕರ್ ಹೆಸರಲ್ಲಿ ನಕಲಿ ವಿದ್ಯುತ್ ಎನ್ಒಸಿ ಪತ್ರಗಳು ಲೀಲಾಜಾಲವಾಗಿ ದೊರಕುತ್ತಿತ್ತು. ವಿಜಯವಾಣಿ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತ ಈಗಿನ ಮುಖ್ಯಾಧಿಕಾರಿ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ, ಕರ ವಸೂಲಿ ಸಿಬ್ಬಂದಿಗೆ ಅನಧಿಕೃತ ಕಟ್ಟಡಕ್ಕೆ ವಿಧಿಸಿದ ತೆರಿಗೆ ಆಕರಣೆ, ಡಿಮಾಂಡ್ ರಜಿಸ್ಟರ್, ವಿದ್ಯುತ್ ಎನ್ಒಸಿ ಪಡೆಯಲು ನೀಡಿದ ಪತ್ರದ ಕಡತಗಳನ್ನು 24 ಗಂಟೆಯೊಳಗೆ ಪೂರೈಸುವಂತೆ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ, ಈ ಕುರಿತು ನಗರ ಪೊಲೀಸ್ ಠಾಣೆಗೆ ತೆರಳಿ ದೂರು ಕೂಡ ನೀಡಿದ್ದರು. ಮುಖ್ಯಾಧಿಕಾರಿಗೆ ಸಂಬಂಧಿಸಿದ ಕಡತಗಳನ್ನು ಸಲ್ಲಿಸುವಲ್ಲಿ ವಿಫಲರಾದ ಇಸ್ಮಾಯಿಲ್ ಗುಬ್ಬಿ ಅವರು ತಪ್ಪೊಪ್ಪಿಕೊಂಡಿದ್ದರು. ತಾನೇ ನಕಲಿ ಪತ್ರವನ್ನು ಸೃಷ್ಟಿಸಿ, ಹಿಂದಿನ ಮುಖ್ಯಾಧಿಕಾರಿಗಳ ಸಹಿಯನ್ನು ಪೋರ್ಜರಿ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಜ. 12ರಂದು ನಗರ ಪೊಲೀಸ್ ಠಾಣೆ ಪಿಎಸ್ಐ ಎಚ್. ಕುಡಗಂಟಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಬಂಧಿತ ಸರ್ಕಾರಿ ನೌಕರ 48 ಗಂಟೆ ನ್ಯಾಯಾಂಗ ಬಂಧನದಲ್ಲಿದ್ದರೆ ಅಮಾನತು ಆಗುತ್ತಾನೆ ಎನ್ನುವ ನಿಯಮವಿದೆ. ಕಚೇರಿ ವಿಚಾರಣೆ ನಡೆಯುವ ಮೊದಲೇ ಪಪಂ ಸಿಬ್ಬಂದಿ ಅಮಾನತುಗೊಳ್ಳುವ ಲಕ್ಷಣ ಕಂಡುಬಂದಿದೆ.