

ಕನಕಪುರ ಪೊಲೀಸರ ಕಾರ್ಯಾಚರಣೆ
ಕನಕಪುರ: ಜಮೀನು ವಿವಾದದ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪಿಯನ್ನು ಕೋಡಿಹಳ್ಳಿ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಕಿನ್‌ಮಾತನೂರು ಗ್ರಾಮದ ಮುನಿಸ್ವಾಮಿ(55) ಬಂಧಿತ. ಪತ್ನಿಯ ಸ್ವಗ್ರಾಮ ಹುಲಿಬಂಡೆಯಲ್ಲಿದ್ದ ಈತ ತಾಲೂಕಿನ ಕೋಡಿಹಳ್ಳಿ ಹೋಬಳಿ ಹುಣಸನಹಳ್ಳಿಯ ಬಾರ್ ಎದುರು ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬರ ಕೊಲೆಗೆ ಪ್ರಚೋದನೆ ನೀಡಿದ್ದ 7ನೇ ಆರೋಪಿಯಾಗಿದ್ದ. ಪ್ರಕರಣ ಸಂಬಂಧ ಕನಕಪುರ ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಸರ್ಕಲ್ ಇನ್‌ಸ್ಪೆಕ್ಟರ್ ವಿಕಾಸ್ ಗೌಡ, ಎಸ್‌ಐ ದುರ್ಗೇಗೌಡ, ಮುಖ್ಯಪೇದೆಗಳಾದ ಮನೋಹರ್, ಶ್ರೀನಿವಾಸ್ ತಂಡ ಹುಲಿಬಂಡೆ ಸಮೀಪ ಆರೋಪಿ ಇರುವ ಮಾಹಿತಿ ಆಧರಿಸಿ ಬಂಧಿಸಿದೆ.
ಕನಕಪುರ ತಾಲೂಕು ಹುಣಸನಹಳ್ಳಿಯಲ್ಲಿ 4 ವರ್ಷದ ಹಿಂದೆ ಜಮೀನು ವಿವಾದದಲ್ಲಿ ಓಬಣ್ಣ ಎಂಬಾತನ ಮೇಲೆ ಚನ್ನಕೃಷ್ಣ ಮತ್ತಿತರರು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಓಬಣ್ಣನ ಮಕ್ಕಳು ಮತ್ತಿತರರು ಪ್ರಮುಖ ಆರೋಪಿ ಕೊಲೆಗೆ ಸಂಚು ರೂಪಿಸಿದ್ದರು. ಕೊಲೆಗೆ ಕಾರಣನಾದ ಪ್ರಮುಖ ಆರೋಪಿ ಶಂಕರ್ ಎಂಬಾತ ಹುಣಸನಹಳ್ಳಿಗೆ ಬಂದಿದ್ದ ಮಾಹಿತಿ ಆಧರಿಸಿ 17 ಮಂದಿ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಬಂಧಿಸಲಾಗಿತ್ತು. ಕೊಲೆಗೆ ಪ್ರಚೋದನೆ ನೀಡಿದ್ದ ಮುನಿಸ್ವಾಮಿ ಅಂದಿನಿಂದ ತಲೆಮರೆಸಿಕೊಂಡಿದ್ದ.