ರಾಮನಗರ: ತಾಲೂಕಿನ ಎಸ್.ಬಿ. ದೊಡ್ಡಿ ಗೇಟ್ ಬಳಿ ಸೋಮವಾರ ರಾತ್ರಿ ಸರಕು ಸಾಗಣೆ ವಾಹನದಲ್ಲಿ ಪಡಿತರ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ವಾಹನ ಚಾಲಕನನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಾಯಂಡಹಳ್ಳಿಯ ತೌಸ್ಿ ಬಂಧಿತ. 6,854 ಕೆಜಿಯ ಸುಮಾರು 120 ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ. ತೌಸ್ಿ ರಾತ್ರಿ 10.30ಕ್ಕೆ ತಾಲೂಕಿನ ಮಾಯಗಾನಹಳ್ಳಿ ಕಡೆಯಿಂದ ಮದ್ದೂರು ಕಡೆಗೆ ಕೇರಳ ನೋಂದಣಿಯ ವಾಹನದಲ್ಲಿ ಅಕ್ಕಿ ಸಾಗಿಸುತ್ತಿದ್ದ. ಎಸ್.ಬಿ. ದೊಡ್ಡಿ ಬಳಿ ವಾಹನ ತಡೆದು ತಪಾಸಣೆ ನಡೆಸಿದಾಗ ಸರ್ಕಾರ ವಿತರಿಸುವ ಪಡಿತರ ಅಕ್ಕಿ ಇರುವುದು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದರು. ಈ ಕುರಿತು ತೌಸಿಫ್‌ನನ್ನು ವಿಚಾರಿಸಿದಾಗ ಆತ ಸಾರ್ವಜನಿಕರಿಂದ ಪಡಿತರ ಅಕ್ಕಿ ಖರೀದಿಸಿ ಮದ್ದೂರು ಬಳಿಯ ಗೆಜ್ಜಲಗೆರೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದ. ಆದರೆ, ಆತನ ಬಳಿ ಅಕ್ಕಿ ಸಾಗಾಟಕ್ಕೆ ಮತ್ತು ಮಾರಾಟಕ್ಕೆ ಪರವಾನಗಿ ಇರಲಿಲ್ಲ. ಹಾಗಾಗಿ, ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.