

ಬಿಡದಿ: ನಿಂಗೇಗೌಡನದೊಡ್ಡಿ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನ ಬಳಿ ಇದ್ದ 5 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು - ಮೈಸೂರು ಹೆದ್ದಾರಿಯ ನಿಂಗೇಗೌಡನದೊಡ್ಡಿ ಬಳಿಯ ಸರೋಜಮ್ಮ ಕಲ್ಯಾಣ ಮಂಟಪದ ಪಕ್ಕದ ಜಮೀನಿನಲ್ಲಿ ಬಿಡದಿಯ ಮೇಡನಹಳ್ಳಿಯ ರಾಜು ಎಂಬಾತ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಆದರಿಸಿ ಬಿಡದಿ ಪೊಲೀಸರು ದಾಳಿ ನಡೆಸಿದ್ದಾರೆ.
ಕನಕಪುರ ತಾಲೂಕಿನ ಚಿಕ್ಕ ಮುದುವಾಡಿ ಗ್ರಾಮದ ಮಾದಯ್ಯ ಅವರ ಬಳಿ ಗಾಂಜಾ ಖರೀದಿಸಿ, ಚಿಕ್ಕ ಪ್ಯಾಕೆಟ್ಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಆತನ ಬಳಿ ಇದ್ದ 475ಗ್ರಾಂ ಹಾಗೂ ಸ್ಕೂಟರ್ ಡಿಕ್ಕಿಯಲ್ಲಿ 1 ಕೆಜಿ ಗಾಂಜಾ ಸಿಕ್ಕಿದೆ. ಸ್ಕೂಟರ್ ದಾಖಲೆಗಳನ್ನು ಪರಿಶೀಲಿಸಿದಾಗ, ಬ್ಯಾಟರಾಯನಪುರ ಠಾಣೆ ಸರಹದ್ದಿನಲ್ಲಿ ಕಳವು ಮಾಡಿಕೊಂಡು ಬಂದಿರುವ ವಿಚಾರ ಬೆಳಕಿಗೆ ಬಂದಿದೆ.
ಹೆಚ್ಚಿನ ವಿಚಾರಣೆ ಮಾಡಿದಾಗ ಬೇರೆ ಕಡೆ ಇಟ್ಟಿದ್ದ ಗಾಂಜಾ ಬಗ್ಗೆಯೂ ಬಾಯಿಬಿಟ್ಟಿದ್ದಾನೆ. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.