ಕುದೂರು: ಮಾಗಡಿ ತಾಲೂಕು ಕುದೂರು ಮಹಾತ್ಮ ನಗರದ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸುವಲ್ಲಿ ಕುದೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕುದೂರು ಗ್ರಾಮದ ನಿವಾಸಿ ಮುತ್ತುರಾಜ್ (31), ಶ್ರೀಗಿರಿಪುರ ಗ್ರಾಮದ ನಿವಾಸಿ ವೆಂಕಟೇಶ್(31) ಮತ್ತು ಕಾಗಿಮಡು ಗ್ರಾಮದ ನಿವಾಸಿ ಶಿವಶಂಕರ್ (27) ಬಂಧಿತರು. ಆರೋಪಿಗಳಿಂದ 16 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ: ಡಿ.19ರಂದು ರಾಗಿ ವ್ಯಾಪಾರಿ ಸತೀಶ್ ಅವರ ಮನೆಯಲ್ಲಿ ಸಂಜೆ ಸುಮಾರು 7 ಗಂಟೆಗೆ ನುಗ್ಗಿದ್ದ ಕಳ್ಳರು ಸುಮಾರು 20 ಲಕ್ಷ ರೂ. ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮನೆಯ ಸಿಸಿ ಕ್ಯಾಮರಾ ಪರಿಶೀಲಿಸಿದ್ದರು. ಈ ವೇಳೆ ರಾಗಿ ಸಾಗಿಸುವ ವಾಹನದ ಚಾಲಕ ಇರಬಹುದು ಎಂದು ಸತೀಶ್ ಸುಳಿವು ನೀಡಿದ್ದರು. ಕುದೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಿ.ನವೀನ್, ಸಿಬ್ಬಂದಿಯಾದ ಸೂರ್ಯಕುಮಾರ್, ನಾಗರಾಜು, ಗುರುಮೂರ್ತಿ, ಶಿವರಾಜು, ದರ್ಶನ್, ಮಹದೇವಯ್ಯ, ಮಾರುತಿ ಕುಮಾರ್, ಸತೀಶ್, ಲೋಹಿತ್, ಅಪ್ಪಾಸಾಬ್ ಕಾರ್ಯಾಚರಣೆಯಲ್ಲಿದ್ದರು.
ದೂರದಲ್ಲೇ ಗಮನಿಸುತ್ತಿದ್ದ ಆರೋಪಿ!: ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಶ್ರೀಗಿರಿಪುರ ಗ್ರಾಮದ ನಿವಾಸಿ ವೆಂಕಟೇಶ್ ಪೊಲೀಸರು ಮನೆಯನ್ನು ಪರಿಶೀಲಿಸುವ ವೇಳೆ ಸ್ಥಳದಿಂದ ಕೂಗಳತೆ ದೂರದಲ್ಲಿ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ. ಸಿಸಿ ಕ್ಯಾಮರಾದ ದೃಶ್ಯಾವಳಿ ನೋಡಿದ ಸತೀಶ್ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಆರೋಪಿಯನ್ನು ಅಲ್ಲಿಯೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ವೆಂಕಟೇಶ್ ಮಾಹಿತಿ ಮೇರೆಗೆ ಇನ್ನಿಬ್ಬರನ್ನು ಬಂಧಿಸಲಾಗಿದೆ.