ಮಾಗಡಿ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾಗಡಿ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 806 ಗ್ರಾಂ ತೂಕದ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ವೆಂಗಳಪ್ಪನ ಹಳ್ಳಿಯ ಸಂತೋಷ್ ನಾಯ್ಕ (24)ಬಂಧಿತ. ಪಟ್ಟಣದ ತಿರುಮಲೆ ಗೇಟ್ ಬಳಿ ಜ.29 ರಂದು ಅಪರಿಚಿತನೊಬ್ಬ ಮಾದಕ ವಸ್ತುವೊಂದನ್ನು ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಮಾಗಡಿ ಇನ್‌ಸ್ಪೆಕ್ಟರ್ ಜಿ.ವೈ.ಗಿರಿರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸಂತೋಷ್ ನಾಯ್ಕ ಬೆಂಗಳೂರಿನಿಂದ ಮಾದಕ ವಸ್ತು ತಂದು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. 6 ತಿಂಗಳಿಂದ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ಪೊಲೀಸರ ಬಳಿ ಆರೋಪಿ ಒಪ್ಪಿಕೊಂಡಿದ್ದಾನೆ. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.