ಪ್ರಾಮಾಣಿಕವಾಗಿ ಕೆಲಸ ಮಾಡಿ: ದಿನೇಶ್ ಗುಂಡೂರಾವ್ ಹೇಳಿಕೆ

Arogya soudha - 1
Published on

 ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಗೊಂಡ 100 ಉದ್ಯೋಗಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಬುಧವಾರ ನೇಮಕಾತಿ ಪತ್ರ ವಿತರಿಸಿದರು.

ನಗರದ ಆರೋಗ್ಯಸೌಧದ ಡಾ.ಬಿ.ಸಿ.ರಾಯ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಸಹಾಯಕ (36 ಮಂದಿ), ದ್ವಿತೀಯ ದರ್ಜೆ ಸಹಾಯಕ (32 ಮಂದಿ) ಗ್ರೂಪ್- ಡಿ (30 ಮಂದಿ), ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗೆ ತಲಾ ಒಬ್ಬರಂತೆ ನೂರು ಮಂದಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.

ಕುಟುಂಬಕ್ಕೆ ಬೆನ್ನೆಲುಬಾಗಿದ್ದವರನ್ನು ಕಳೆದುಕೊಂಡಾಗ ದೊಡ್ಡ ಆಘಾತವಾಗುತ್ತದೆ. ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಅಂತಹವರಿಗಾಗಿ ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕೆನ್ನುವ ನಿಯಮವಿದೆಯಾದರೂ, ಅದಕ್ಕೆ ಸಾಕಷ್ಟು ವಿಳಂಬವಾಗುತ್ತದೆ. ಆದರೆ ನಮ್ಮ ಸರ್ಕಾರ ಲಾನುಭವಿಗಳನ್ನು ಅಲೆದಾಡಿಸದೇ ಉದ್ಯೋಗ ನೀಡಿದೆ ಎಂದರು.

ಒಟ್ಟು 116 ಮಂದಿಗೆ ಉದ್ಯೋಗ ನೀಡಲಾಗಿದೆ. ಈಗ 100 ನೂರು ಮಂದಿಗೆ ನೇಮಕಾತಿ ಪತ್ರ ನೀಡಲಾಗಿದೆ. ಇದಲ್ಲದೆ ಇನ್ನೂ 60 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳನ್ನೂ ಶೀಘ್ರವೇ ಅಂತಿಮಗೊಳಿಸಲಾಗುವುದು. ಸರ್ಕಾರಿ ಕೆಲಸ ದೊರೆಯುವುದು ಸುಲಭ ಸಾಧ್ಯವಲ್ಲ. ಯಾರೇ ಆಗಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆ ಮೂಲಕ ಇಲಾಖೆ ಹಾಗೂ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ. ಶಿವಕುಮಾರ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net