

ಬೆಂಗಳೂರು: ಕಳೆದ ಐವತ್ತೈದು ವರ್ಷಗಳಿಂದ ಅಸ್ತಿತ್ವದಲ್ಲಿರುವ ಆರ್ಮಿ ಸರ್ವೀಸ್ ಕಾರ್ಪ್ಸ್ (ಎಎಸ್‌ಸಿ) ರಾಷ್ಟ್ರದ ಉದ್ದಗಲಕ್ಕೂ ಸಾವಿರಾರು ಪ್ರದರ್ಶನಗಳಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ಹಲವಾರು ದಾಖಲೆಗಳನ್ನು ನಿರ್ಮಾಣ ಮಾಡಿದ್ದು, ಮಂಗಳವಾರ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲಿ ಮತ್ತೊಂದು ವಿಶ್ವದಾಖಲೆಗೆ ಎಎಸ್‌ಸಿ ತನ್ನ ಸಾಹಸ ಪ್ರದರ್ಶನದ ಮೂಲಕ ಸಾಕ್ಷಿಯಾಗಿದೆ.
264ನೇ ಆರ್ಮಿ ಸರ್ವೀಸ್ ಕಾರ್ಪ್ಸ್ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮೂರು ಪ್ರತ್ಯೇಕ ವಿಶ್ವದಾಖಲೆಗೆ ಇಂದಿನ ಸಾಹಸ ಪ್ರದರ್ಶನ ಮುನ್ನುಡಿ ಬರೆಯಿತು.
ಸುಬೇದಾರ್ ಪ್ರದೀಪ್ ಎಸ್.ಎಸ್. ಹಿಂಬದಿ ಕುಳಿತು ಬೈಕ್ ಚಾಲನೆಯಲ್ಲಿ ಅತಿಹೆಚ್ಚು ದೂರ ಕ್ರಮಿಸಿದ ಹೊಸ ದಾಖಲೆ ಬರೆದಿದ್ದಾರೆ. ಹವಾಲ್ದಾರ್ ಮನೀಶ್ 2.349 ಕಿ.ಮೀ.ದೂರದವರೆಗೆ ಬೇಸಿಕ್ ಹ್ಯಾಂಡ್ ಫ್ರೀ ವೀಲ್‌ನಲ್ಲಿ ಚಾಲನೆ ಮಾಡುವ ಮೂಲಕ ದಾಖಲೆ ಮಾಡಿದ್ದಾರೆ. ಸಿಪಾಯಿ ಸುಮಿತ್ ತೋಮರ್ 1.715 ಕಿ.ಮೀ ದೂರದ ಅತಿ ಉದ್ದದ ನೋ ಹ್ಯಾಂಡ್ ವೀಲ್‌ನಲ್ಲಿ ಬೈಕ್ ಓಡಿಸಿ ದಾಖಲೆ ಮಾಡಿದ್ದು, ಒಂದೇ ಮೂರು ಹೊಸ ದಾಖಲೆಗಳನ್ನು ಮಾಡಿದ್ದಾರೆ.
ಎಎಸ್‌ಸಿ ತಂಡವು ಈ ಹಿಂದೆ ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹೀಗೆ ಸುಮಾರು 35 ವಿಶ್ವ ದಾಖಲೆಗಳ ಗೌರವವನ್ನು ತನ್ನದಾಗಿಸಿಕೊಂಡಿದೆ.