ಮೂಲಸ್ವರೂಪ ಕಳೆದುಕೊಂಡ ಅರ್ಕೇಶ್ವರ ಕಾಲನಿ

Rmgm-Ph-02-Ward Wach -Seeralla Arkeswara Colony Rmgm-18-10-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ನೆರೆ ಬಂದು ಮೂಲ ಸ್ವರೂಪವನ್ನೇ ಕಳೆದುಕೊಂಡಿರುವ ನಗರಸಭೆ 21ನೇ ವಾರ್ಡ್‌ನ ಅರ್ಕೇಶ್ವರ ಕಾಲನಿಗೆ ಮತ್ತಷ್ಟು ಕಾಯಕಲ್ಪ ಬೇಕಿದೆ. 21ನೇ ವಾರ್ಡ್ ಎಲ್ಲಿದೆ ಎಂದರೆ ಗೊತ್ತಿಲ್ಲ ಎನ್ನುವವರೇ ಹೆಚ್ಚು. ಆದರೆ ಅರ್ಕೇಶ್ವರ ಕಾಲನಿ ಎಂದರೆ ಯಾರನ್ನೇ ಕೇಳಿದರೂ ಗೊತ್ತು ಎನ್ನುತ್ತಾರೆ. ವಾರ್ಡ್ ಅರ್ಕೇಶ್ವರ ಕಾಲನಿ ಮತ್ತು ಕೊತ್ತೀಪುರದವರೆಗೆ ವಿಸ್ತೀರ್ಣ ಹೊಂದಿದೆ.

ಕಳೆದ ವರ್ಷ ಮಳೆಯಿಂದಾಗಿ ಉಂಟಾದ ನೆರೆ, ವಾರ್ಡ್‌ನ ಜನರಿಗೆ ಬಹಳಷ್ಟು ಸಂಕಷ್ಟ ತಂದೊಡ್ಡಿತು. ಮನೆಗಳು, ರಸ್ತೆಗಳು, ಚರಂಡಿ ಹಾಳಾದವು. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ವಸ್ತುಗಳಿಗೆ ಹಾನಿಯಾಗಿ, ಕೆಲವು ಮನೆಗಳು ನೆಲಕಚ್ಚಿದ್ದವು. ಜತೆಗೆ ಸೀರಳ್ಳದ ನೀರು ನುಗ್ಗಿ ಹಿಂದು ರುದ್ರಭೂಮಿ ಸ್ಮಶಾನ ತಡೆಗೋಡೆ ಕೂಡ ಉರುಳಿಬಿದ್ದಿತ್ತು. ಇಲ್ಲಿನ ನಿವಾಸಿಗಳು ಮತ್ತೆ ಬದುಕು ಕಟ್ಟಿಕೊಳ್ಳಲು ಸುಮಾರು ತಿಂಗಳುಗಳೇ ಕಳೆಯಿತು. ಈಗ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ, ಆದರೆ ಚರಂಡಿ, ರಸ್ತೆ ನಿರ್ಮಾಣ ಆಗಬೇಕಿದೆ.

ನಗರಸಭೆ ವತಿಯಿಂದ ಸೀರಳ್ಳಕ್ಕೆ 100 ಮೀ.ನಷ್ಟು ತಡೆಗೋಡೆ ನಿರ್ಮಿಸಿದ್ದರಿಂದ ಒಂದಷ್ಟು ಆತಂಕ ದೂರವಾಗಿದೆ. ಆದರೆ ಇನ್ನೂ 100 ಮೀಟರ್ ಕಾಮಗಾರಿ ಬಾಕಿ ಉಳಿದಿದೆ. ಇದು ಪೂರ್ಣಗೊಂಡರಷ್ಟೇ ವಾರ್ಡ್‌ನ ಜನ ನೆರೆ ಭೀತಿಯಿಂದ ನೆಮ್ಮದಿ ಕಾಣಬಹುದು. ನಗರದ ಚರಂಡಿ ನೀರು ಹರಿಯುವ ಕಾರಣ ಸೊಳ್ಳೆ, ಹಂದಿಗಳ ತಾಣವಾಗಿದೆ.

ಹದಗೆಟ್ಟ ಹುಣಸನಹಳ್ಳಿ ರಸ್ತೆ

ಕಳೆದ ಬಾರಿ ಉಂಟಾದ ನೆರೆ ಪ್ರವಾಹದಲ್ಲಿ ವಾರ್ಡ್‌ನ ಐದು ರಸ್ತೆಗಳ ಸಿಮೆಂಟ್ ಕಿತ್ತು ಬಂದಿದೆ. ಅಲ್ಲಲ್ಲಿ ಚರಂಡಿ, ಸಿಸಿ ರಸ್ತೆ ಕಾಮಗಾರಿ ನಡೆಯಬೇಕಿದೆ. ಹುಣಸನಹಳ್ಳಿ ರಸ್ತೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯಿಂದಾಗಿ ರಸ್ತೆ ಹಾಳಾಗಿದೆ. ಮಳೆ ಬಂದರೆ ಕೆಸರುಗದ್ದೆಯಾಗುವ ರಸ್ತೆ, ಬಿಸಿಲು ಬಂದರೆ ಧೂಳುಮಯವಾಗುತ್ತದೆ. ಇದರ ನಡುವೆಯೇ ಪ್ರತಿದಿನ ಜನರು, ವಾಹನ ಸವಾರರು ಓಡಾಡಬೇಕಿದೆ. ರಸ್ತೆ ಗುಂಡಿಗಳಿಂದ ತುಂಬಿದೆ.

ರುದ್ರಭೂಮಿ, ದೇವಾಲಯ, ಉದ್ಯಾನವನ

ಹಿಂದು ರುದ್ರಭೂಮಿಯ ಕಾಂಪೌಂಡ್ ಕುಸಿದು ವರ್ಷ ಕಳೆದರೂ ದುರಸ್ತಿಯಾಗಿಲ್ಲ. ಕಾಂಪೌಂಡ್ ನಿರ್ಮಿಸಿ ಮೂಲಸೌಲಭ್ಯ ಒದಗಿಸಬೇಕು. ಸ್ಮಶಾನದಲ್ಲಿ ಬೆಳೆದಿರುವ ಗಿಡ-ಗಂಟಿಗಳನ್ನು ತೆರವುಗೊಳಿಸಬೇಕು. ವಿದ್ಯುತ್ ಚಿತಾಗಾರ ನಿರ್ಮಿಸಬೇಕು. ವಾರ್ಡ್‌ನಲ್ಲಿ ಯಾವುದೇ ದೇವಾಲಯ ಇಲ್ಲ. ಹಾಗಾಗಿ ನಗರಸಭೆಯಿಂದ ಆಂಜನೇಯ ದೇವಾಲಯ ನಿರ್ಮಾಣ ಮಾಡಿಕೊಡಬೇಕು. ವಾರ್ಡ್‌ನಲ್ಲಿ ಯಾವುದೇ ಉದ್ಯಾನವಿಲ್ಲ. ಹಿಂದು ರುದ್ರಭೂಮಿಯ ಖಾಲಿ ಜಾಗದಲ್ಲಿ ವಾಕಿಂಗ್ ಟ್ರ್ಯಾಕ್, ಬೆಂಚುಗಳನ್ನು ಅಳವಡಿಸಿ ಉದ್ಯಾನವನ ನಿರ್ಮಿಸಬೇಕು ಎನ್ನುವುದು ವಾರ್ಡ್ ನಿವಾಸಿಗಳ ಒತ್ತಾಸೆಯಾಗಿದೆ.

ಅಂಗನವಾಡಿ

ಅಂಗನವಾಡಿ ಕೇಂದ್ರದಲ್ಲಿ 25 ಮಕ್ಕಳಿದ್ದು, ಪ್ರಸ್ತುತ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕೇಂದ್ರ ನಡೆಯುತ್ತಿದೆ. ವಾರ್ಡ್‌ನಲ್ಲೇ ಅಂಗನವಾಡಿ ಕೇಂದ್ರ ನಿರ್ಮಾಣ ಆಗಬೇಕಿದೆ.

ವಾರ್ಡ್ ವ್ಯಾಪ್ತಿಅರ್ಕೇಶ್ವರ ಕಾಲನಿ, ಹುಣಸನಹಳ್ಳಿ ರಸ್ತೆ, ಕೊತ್ತಿಪುರಪೊಲೀಸ್ ಹೊರ ಠಾಣೆ28 ವರ್ಷಗಳ ಹಿಂದೆ ಅರ್ಕೇಶ್ವರ ಕಾಲನಿಯ ಹುಣಸನಹಳ್ಳಿ ರಸ್ತೆಯಲ್ಲಿ ಪೊಲೀಸ್ ಹೊರ ಠಾಣೆ ಇತ್ತು. ನಂತರ ಈ ಠಾಣೆ ತೆರವಾಗಿದೆ. ಹಿಂದೂ ರುದ್ರಭೂಮಿ ಎದುರು ಹೊರ ಠಾಣೆಗೆ ಜಾಗವನ್ನು ಮೀಸಲಿಡಲಾಗಿದೆ. ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಕೂಡಲೇ ಹೊರ ಠಾಣೆ ಆರಂಭಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ವಾರ್ಡ್‌ನಲ್ಲಿ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಹೊಸದಾಗಿ ನಿರ್ಮಿಸಬೇಕಿದೆ. ನೆರೆ ಹಾವಳಿಯಿಂದ ರಸ್ತೆ, ಚರಂಡಿ ರಸ್ತೆಗಳು ಹಾಳಾಗಿವೆ. ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗಬೇಕಿದೆ. ನೆರೆ ಹಾವಳಿಯಲ್ಲಿ ಹಾನಿಯಾದ ಮನೆಗಳಿಗೆ ಸಹಾಯಧನದ ಕಂತುಗಳು ಬಾಕಿ ಉಳಿದಿವೆ. ಸರ್ಕಾರ ಬಾಕಿ ಕಂತುಗಳನ್ನು ಸಂತ್ರಸ್ತರಿಗೆ ತಲುಪಿಸಬೇಕು. ಜತೆಗೆ ರಸ್ತೆ, ಚರಂಡಿ ಅಭಿವೃದ್ಧಿಗೆ ನಗರಸಭೆ ಕೂಡಲೇ ಒತ್ತು ನೀಡಬೇಕು.

ರಾಜು, ಸ್ಥಳೀಯ ನಿವಾಸಿ

ನೆರೆ ಪ್ರವಾಹದಿಂದ ವಾರ್ಡ್ ಬಹಳಷ್ಟು ಸಮಸ್ಯೆ ಎದುರಿಸುತ್ತಿದೆ. ಸೀರಳ್ಳದ ತಡೆಗೋಡೆ ನಿರ್ಮಾಣ ಸ್ವಲ್ಪ ನೆಮ್ಮದಿ ತಂದಿದೆ. ಬಾಕಿ ತಡೆಗೋಡೆ ನಿರ್ಮಾಣ ಆಗಬೇಕಿದೆ. ನಗರೋತ್ಥಾನ ಅಡಿಯಲ್ಲಿ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಹುಣಸನಹಳ್ಳಿ ರಸ್ತೆಯಲ್ಲಿ ಕುಡಿಯುವ ನೀರು ಪೈಪ್‌ಲೈನ್ ಕಾಮಗಾರಿಯಿಂದಾಗಿ ಸಮಸ್ಯೆ ಉಂಟಾಗಿದೆ. ವಾರ್ಡ್‌ನ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಲಾಗಿದೆ.

ರಮೇಶ್, ನಗರಸಭೆ ಸದಸ್ಯಏನೇನು ಆಗಬೇಕಿದೆ?* ಸೀರಳ್ಳಕ್ಕೆ ಬಾಕಿ ಉಳಿದಿರುವ ತಡೆಗೋಡೆ ಪೂರ್ಣಗೊಳ್ಳಬೇಕುನೂತನ ದೇವಾಲಯ*ಹೊರ ಪೊಲೀಸ್ ಠಾಣೆ*ಅಂಗನವಾಡಿ ನೂತನ ಕಟ್ಟಡ ನಿರ್ಮಾಣ *ರಸ್ತೆ, ಚರಂಡಿ ನಿರ್ಮಾಣ*ಹುಣಸನಹಳ್ಳಿ-ರಾಮನಗರ ರಸ್ತೆ ಡಾಂಬರೀಕರಣ*ಹಿಂದು ರುದ್ರಭೂಮಿಗೆ ಕಾಂಪೌಂಡ್ ನಿರ್ಮಾಣ*ನಿವೇಶನ ಇಲ್ಲದ ಜನರಿಗೆ ಸೂರು.* ಉದ್ಯಾನವನ

====

* ರಮೇಶ್, ನಗರಸಭೆ ಸದಸ್ಯ, 21ನೇ ವಾರ್ಡ್. ಮೊಬೈಲ್ ಸಂಖ್ಯೆ 9945255394* ವಾರ್ಡ್‌ನ ಜನಸಂಖ್ಯೆ: 5000 * ಮತದಾರರ ಸಂಖ್ಯೆ: 1850

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net