

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಪ್ರಮುಖ ಜಲಮೂಲವಾಗಿದ್ದ ಅರ್ಕಾವತಿ ನದಿಯನ್ನು ಪುನಶ್ಚೇತನಗೊಳಿಸಲು ಪ್ರಕ್ರಿಯೆ ಆರಂಭವಾಗಿದ್ದು, ಈ ಸಂಬಂಧ ತಜ್ಞರ ಸಮಿತಿ ರಚಿಸಲು ಮತ್ತು ಸಾರ್ವಜನಿಕ, ಖಾಸಗಿ ಸಹಭಾಗಿತ್ವದಡಿ ನದಿಯನ್ನು ಪುನರುಜ್ಜೀವನಗೊಳಿಸುವ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ನಂದಿಬೆಟ್ಟದಿಂದ ಟಿ.ಜಿ.ಹಳ್ಳಿವರೆಗೆ 53 ಕಿ.ಮೀ.ಉದ್ದ, 1400 ಚದರ ಕಿ.ಮೀ.ವ್ಯಾಪ್ತಿಯಲ್ಲಿ ಅರ್ಕಾವತಿ ನದಿಯ ಪಾತ್ರವಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರ್ಕಾರದ ಹಲವಾರು ಸಂಸ್ಥೆಗಳು, ಎನ್.ಜಿ.ಒ.ಗಳು ಮತ್ತಿತರೆ ಪಾಲುದಾರರ ಜತೆಗೂಡಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಎತ್ತಿನ ಹೊಳೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಬಂದಿದ್ದರೆ ಎರಡೂ ನದಿಗಳ ನೀರನ್ನು ಮಿಶ್ರಣ ಮಾಡಿ ಪೂರೈಸುವ ಉದ್ದೇಶವಿತ್ತು. ಕುಡಿಯಲು ಯೋಗ್ಯವಾದ ರೀತಿಯಲ್ಲಿ ನೀರು ಒದಗಿಸಬೇಕಿತ್ತು. ನಗರದಲ್ಲಿ ಉಂಟಾದ ಕೈಗಾರಿಕಾ ಬೆಳವಣಿಗೆ, ಕೈಗಾರಿಕಾ ತ್ಯಾಜ್ಯ, ಪರಿಸರ ಮಾಲಿನ್ಯ, ಒಳಚರಂಡಿಯಂತಹ ಗಂಭೀರ ಸಮಸ್ಯೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಮಲಿನಗೊಂಡಿದೆ. ಕುಡಿಯಲು ಯೋಗ್ಯವಲ್ಲದಾಗಿದೆ. ಹೀಗಾಗಿ ಪುನಶ್ಚೇತನ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವ ಅಗತ್ಯವಿದೆ ಎಂದರು.
ಜಲಮಂಡಳಿಯ ಮುಖ್ಯ ಇಂಜಿನಿಯರ್, ಮೂಲಸೌಕರ್ಯ ಅಭಿವೃದ್ದಿ ನಿಗಮದ ಸಲಹೆಗಾರರು, ಬಿಬಿಎಂಪಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಉನ್ನತಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಪಿಪಿಪಿ ಮಾದರಿಯಲ್ಲಿ ಪುನಶ್ಚೇತನ
ಐಡೆಕ್ ಸಂಸ್ಥೆಯು ಹೆಸರಘಟ್ಟ, ಮಾದನಾಯಕನ ಹಳ್ಳಿ, ಬಿಬಿಎಂಪಿ ಪ್ರದೇಶ ಮತ್ತಿತರೆ ನದಿತಟದ ಭಾಗದಲ್ಲಿ ಅಧ್ಯಯನ ನಡೆಸಿದ್ದು, ಪುನಶ್ಚೇತನಕ್ಕಾಗಿ ವರದಿ ಸಿದ್ಧಪಡಿಸುತ್ತಿದೆ. ಪಿಪಿಪಿ ಮಾದರಿಯಲ್ಲಿ ಅರ್ಕಾವತಿ ನದಿಯನ್ನು ಪುನರುಜ್ಜೀವಿನಗೊಳಿಸುವ ಯೋಜನೆ ರೂಪಿಸಲಾಗುತ್ತಿದೆ. ನದಿ ಪಾತ್ರದಲ್ಲಿ ಜಲಮಂಡಳಿಯ ವ್ಯಾಪ್ತಿ ಪ್ರದೇಶ ಶೇ.15 ಮಾತ್ರ ಇದೆ. ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಹಲವು ಸ್ವಯಂಸೇವಾ ಸಂಸ್ಥೆಗಳು ಸಹ ಅಧ್ಯಯನ ಮಾಡಿದ್ದು, ಎಲ್ಲರನ್ನೊಳಗೊಂಡ ತಜ್ಞರ ಸಮಿತಿ ರಚಿಸಿ ಪುನಶ್ಚೇತನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.