ನರೇಗಲ್ಲನಲ್ಲಿ ಸಂತೆ ಸ್ಥಳ ವಿವಾದ ಸಭೆಯಲ್ಲಿ ವಾಗ್ವಾದ

nrgl market
Published on

ನರೇಗಲ್ಲ: ಸಂತೆ ಸ್ಥಳದ ವಿವಾದವನ್ನು ಸಂಪೂರ್ಣ ಬಗೆಹರಿಸಲು ಆಡಳಿತ ಸಿದ್ಧತೆ ನಡೆಸಿದೆ. ಸಂತೆ ನಡೆಸಲು ಪಟ್ಟಣದಲ್ಲಿ ಮೂರು ಸ್ಥಳಗಳಿದ್ದು, ಸಾರ್ವಜನಿಕರ ಅಭಿಪ್ರಾಯ ಪಡೆದು ಸೂಕ್ತ ಸ್ಥಳವನ್ನು ಇನ್ನೊಂದು ವಾರದಳೊಗೆ ನಿಗದಿ ಮಾಡಲಾಗುವುದು. ಸೋಮವಾರದ (ದಿ. 21ರಂದು) ಸಂತೆಯು ಕಳೆದ ವಾರ ನಡೆದಂತೆ ಅಬ್ಬಿಗೇರಿ ರಸ್ತೆಯಲ್ಲಿಯೇ ನಡೆಯಲಿದೆ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.


ಪಟ್ಟಣ ಪಂಚಾಯಿತಿ ಆವರಣದಲ್ಲಿ ಶನಿವಾರ ಸಂತೆಯ ಸ್ಥಳ ನಿಗದಿಗಾಗಿ ಕರೆದಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಮ್ಮ ಅಹವಾಲು ಏನೆಂಬುದು ನಮಗೆ ಗೊತ್ತಿದೆ. ಇಲ್ಲಿ ಸಂತೆ ಸ್ಥಳಾಂತರದ ಬಗ್ಗೆ ಪರ- ವಿರೋಧ ಅಭಿಪ್ರಾಯಗಳಿವೆ. ಕಳೆದ ವಾರ ನಡೆದ ಸ್ಥಳದಲ್ಲಿಯೇ ಇದೊಂದು ವಾರ ಸಂತೆ ನಡೆಯಲಿ. ಆಗಸ್ಟ್ 28ರ ಸಂತೆ ಎಲ್ಲಿ ನಡೆಯಬೇಕೆಂಬ ಬಗ್ಗೆ ನಿರ್ಧರಿಸಿ ನಿಮಗೆ ಎಲ್ಲ ವಿವರಗಳನ್ನೂ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.


ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ಮಾತನಾಡಿ, ಸಂತೆ ಸ್ಥಳಾಂತರದ ಪರ ಮತ್ತು ವಿರೋಧ ಪತ್ರಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಾವು ಪರ ಮತ್ತು ವಿರೋಧ ಇರುವವರನ್ನು ಕರೆದು ಮಾತನಾಡಲು ಈ ಸಭೆ ಏರ್ಪಡಿಸಿದ್ದೇವೆ ಎಂದು ಹೇಳುತ್ತಲೆ ಸಭೆಯಲ್ಲಿ ಗದ್ದಲ ಶುರುವಾಯಿತು.



ಪ.ಪಂ. ಮಾಜಿ ಅಧ್ಯಕ್ಷ ಕಲ್ಮೇಶ ತೊಂಡಿಹಾಳ, ಶರಣಪ್ಪ ಕಲಾಲಬಂಡಿ, ಮಾಜಿ ಸದಸ್ಯ ಶಶಿಧರ ಸಂಕನಗೌಡ್ರ, ವೀರಣ್ಣ ಗುಜಮಾಗಡಿ, ರಾಜು ಅಣ್ಣಿಗೇರಿ ನೇತೃತ್ವದಲ್ಲಿ ಆಗಮಿಸಿದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಂತೆಯನ್ನು ಸ್ಥಳಾಂತರ ಮಾಡಬೇಡಿ. 115 ವರ್ಷಗಳಿಂದ ಸಂತೆ ನಡೆಯುತ್ತಿರುವ ಸ್ಥಳದಲ್ಲಿಯೇ ಸಂತೆಯನ್ನು ಮುಂದುವರಿಸಿ. ಅಲ್ಲಿರುವ ಬಂಡಿ, ಟ್ರ್ಯಾಕ್ಟರ್ ಇಂಜಿನ್​ಗಳನ್ನು ನಾವು ಸಂತೆಯ ದಿನ ತೆಗೆದು ಬೇರೆಡೆಗೆ ಇಟ್ಟು ಸಂತೆ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಡುತ್ತೇವೆ ಎಂದು ತಹಸೀಲ್ದಾರ್​ರಿಗೆ ಭರವಸೆ ನೀಡಿದರು.


ಸಂತೋಷ ಹನುಮಸಾಗರ, ಶರಣಪ್ಪ ಧರ್ವಯತ, ಶೇಖಪ್ಪ ಕೆಂಗಾರ, ಮಂಜುನಾಥ ಕಮಲಾಪುರ, ರವಿ ಮುಗಳಿ, ಮೈಲಾರಪ್ಪ ಗೋಡಿ, ಶ್ಯಾಮಣ್ಣ ಹನುಮಸಾಗರ, ಕಲ್ಲಪ್ಪ ಮುಳಗುಂದ, ಮೈಲಾರಪ್ಪ ಚಳ್ಳಮರದ, ರಮೇಶ ಕೋಲಕಾರ, ಮುತ್ತಪ್ಪ ಹಡಪದ, ಸದ್ದಾಂ ನಶೇಖಾನ, ಸಂತೋಷ ಮಣ್ಣೊಡ್ಡರ ಇದ್ದರು. ಎಎಸ್​ಐ ಹೊಸಳ್ಳಿ ಮತ್ತು ಸಿಬ್ಬಂದಿ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು.

ಬದಲಾವಣೆಗೆ ಹೊಂದಿಕೊಳ್ಳಬೇಕುನಾನು ಸಂತೆ ನಡೆಯುವ ಸ್ಥಳವನ್ನು ನೋಡಿ ಬಂದಿದ್ದೇನೆ. 115 ವರ್ಷಗಳಿಂದಲೂ ಅಲ್ಲಿ ಸಂತೆ ನಡೆದಿದೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿದೆ. ಆದರೆ, ಆ ಜಾಗ ತುಂಬಾ ಇಕ್ಕಟ್ಟಿನ ಸ್ಥಳವಾಗಿದೆ. ದಿನಗಳು ಕಳೆದಂತೆ ನಾವೂ ಸಹ ಬದಲಾವಣೆಗೆ ಹೊಂದಿಕೊಳ್ಳಬೇಕು. ಮುಂದಿನ ಭಾನುವಾರದೊಳಗೆ ಇದಕ್ಕೊಂದು ಪರಿಹಾರ ಕಂಡು ಹಿಡಿಯೋಣ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು. ಅದು ನಿರ್ಧಾರವಾಗುವವರೆಗೂ ಸಂತೆ ಚಾವಡಿಯ ಬಯಲಿನಲ್ಲಿಯೇ ನಡೆಯಲಿ ಎಂಬ ಕೂಗುಗಳು ಕೇಳಿ ಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net