ಸುಳ್ಳಿನ ವಿಚಾರ ಕುರಿತು ಮಹಿಳೆ-ಪುರುಷರ ಪರ ವಾದ ಮಂಡನೆ

8-pnp 1
ಪಾಂಡವಪುರದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಚಿಣ್ಣರ, ಜಾಣರ ಜಗುಲಿ ಹರಟೆ ಕಾರ್ಯಕ್ರಮವನ್ನು ಹರಟೆ ಖ್ಯಾತಿಯ ಇಂದುಮತಿ ಸಾಲಿಮಠ ಉದ್ಘಾಟಿಸಿದರು. ಜೆ.ಎನ್.ರಾಮಕೃಷ್ಣೇಗೌಡ, ಶಿವಪ್ಪ, ಎಸ್.ದಯಾನಂದ್ ಇತರರು ಇದ್ದರು.
Published on

ಪಾಂಡವಪುರ: ಚಂದಮಾಮನ ತೋರಿಸಿ, ಗುಮ್ಮ ಬರುತ್ತಾನೆ ಎಂದು ಬೆದರಿಸಿ ಅಮ್ಮ ಮಕ್ಕಳಿಗೆ ಊಟ ಮಾಡಿಸುತ್ತಾಳೆ. ಆದರೆ ಅಮ್ಮನ ಮಾತು ವಾಸ್ತವತೆಗೆ ದೂರ ಇರುತ್ತದೆ. ಮಹಿಳೆಯರು ತಮ್ಮ ವೈಯಕ್ತಿಕ ಜೀವನ ಮತ್ತು ಸಂಸಾರ ನಿರ್ವಹಣೆ ಸಂದರ್ಭದಲ್ಲಿ ಸುಳ್ಳುಗಳ ಹಿಂದೆ ಬೀಳುತ್ತಾರೆ. ಹೀಗಾಗಿ, ಮಹಿಳೆಯರೇ ಜೀವನದಲ್ಲಿ ಹೆಚ್ಚು ಸುಳ್ಳು ಹೇಳುತ್ತಾರೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಾನುವಾರ ನಡೆದ ಹರಟೆ ಕಾರ್ಯಕ್ರಮದಲ್ಲಿ ವಾದಿಸಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 51ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಪ್ರಯುಕ್ತ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಚಿಣ್ಣರ ಜಾಣರ ಜಗುಲಿ ಎಂಬ ವಿನೂತನ ಮಕ್ಕಳ ಹರಟೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಮಹಿಳೆಯರು ಹೆಚ್ಚು ಸುಳ್ಳು ಹೇಳುತ್ತಾರೋ ಅಥವಾ ಪುರುಷರು ಹೆಚ್ಚು ಸುಳ್ಳು ಹೇಳುತ್ತಾರೋ ಎಂಬ ವಿಷಯ ಕುರಿತಂತೆ ಹರಟೆ ಖ್ಯಾತಿಯ ಇಂದುಮತಿ ಸಾಲಿಮಠ ಸಾರಥ್ಯದಲ್ಲಿ ತಮ್ಮ ವಾದ ಮಂಡಿಸಿದರು.

ಪಕ್ಕದ ಮನೆಯವರ ಗಂಡ ಏನೂ ತಂದುಕೊಡದಿದ್ದರೂ ಫ್ರಿಡ್ಜ್, ರೇಷ್ಮೆ ಸೀರೆ ತಂದುಕೊಟ್ಟಿದ್ದಾನೆ. ನೀವು ಏನೂ ತಂದಿದ್ದೀರಾ? ಎಂದು ಗಂಡನಿಗೆ ಸುಳ್ಳು ಹೇಳಿ ಅಗತ್ಯತೆ ಪೂರೈಸಿಕೊಳ್ಳುತ್ತಾರೆ. ಹೆಣ್ಣು ನೋಡುವ ಶಾಸ್ತ್ರಕ್ಕೆ ಮನೆಗೆ ಬರುವ ಗಂಡಿನ ಸಂಬಂಧಿಕರ ಮುಂದೆ ತಮ್ಮ ಮಗಳಿಗೆ ಅಡುಗೆ, ಕಾಫಿ, ಟೀ ಕೊನೆಗೆ ಬಿಸಿ ನೀರು ಕಾಯಿಸಲು ಬರದಿದ್ದರೂ ಎಲ್ಲವನ್ನು ಅವಳೇ ಮಾಡಿದ್ದು ಎಂದು ಸುಳ್ಳುಗಳ ಕಂತೆ ಕಟ್ಟಿ ನಂಬಿಸುತ್ತಾರೆ. ಗಂಡಸರು ಸುಳ್ಳು ಹೇಳುವುದು ಕಡಿಮೆ. ಸತ್ಯಹರಿರ್ಶಚಂದ್ರ, ಶ್ರೀರಾಮಚಂದ್ರ, ಯಮಧರ್ಮ ಎಲ್ಲರೂ ಗಂಡಸರೇ. ಗಂಡಸರ ನ್ಯಾಯ, ನೀತಿ, ಧರ್ಮ, ಸತ್ಯ ಪಾಲನೆ ಪುರಾಣ ಕಾಲದಿಂದಲೂ ಸಾಬೀತಾಗಿದೆ. ಹೀಗಾಗಿ ಅತಿ ಹೆಚ್ಚು ಸುಳ್ಳು ಹೇಳುವುದು ಮಹಿಳೆಯರು ಎಂದು ವಿದ್ಯಾರ್ಥಿಗಳ ಒಂದು ತಂಡ ಮಹಿಳೆಯರ ಪರ ವಾದ ಮಾಡಿದರು.

ಸ್ನೇಹಿತರ ಜತೆ ಪಾರ್ಟಿ ಮಾಡಿಕೊಂಡು ಬರುವ ಗಂಡಸರು ಆಫೀಸ್ ಕೆಲಸದ ಒತ್ತಡ ಇತ್ತು ಎಂದು ಇಲ್ಲ ಸಲ್ಲದ ಸುಳ್ಳುಗಳ ಕಂತೆ ಕಟ್ಟಿ ಪತ್ನಿಯ ಬಾಯಿ ಮುಚ್ಚಿಸುತ್ತಾರೆ. ಹೋಟೆಲ್‌ನಲ್ಲಿ ಕ್ಲೀನರ್ ಕೆಲಸ ಮಾಡುತ್ತಿದ್ದರೂ ಮ್ಯಾನೇಜರ ಎಂದು ಜಂಬ ತೋರಿಸುವುದು ಗಂಡಸರ ಹುಟ್ಟುಗುಣ. ಗಂಡಸರು ಸುಳ್ಳಿನ ಕಾರ್ಖಾನೆ ಇದ್ದಂತೆ. ಸತ್ಯಹರಿಶ್ಚಂದ್ರ ಕೂಡ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಆಗಲಿಲ್ಲ. ಮದುವೆ ಸಂದರ್ಭದಲ್ಲಿ ಹಿಂದು ಸಂಪ್ರದಾಯದಂತೆ ಸಪ್ತಪದಿ ತುಳಿಯುವಾಗ ಎಷ್ಟೇ ಕಷ್ಟ ಬಂದರೂ ಕೊನೆವರೆಗೂ ಕಾಪಾಡುತ್ತೇನೆ ಎಂದು ಮಾತು ಕೊಟ್ಟು ಸತ್ಯದ ನೆಪದಲ್ಲಿ ಹಂಡತಿ ಮಕ್ಕಳನ್ನು ನಡುಬೀದಿಯಲ್ಲಿ ಬಿಟ್ಟರು. ಹೀಗಾಗಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಸುಳ್ಳುಗಾರರು ಎಂದು ಮತ್ತೊಂದು ತಂಡ ವಾದಿಸಿತು.

ಗ್ಯಾರಂಟಿ ಯೋಜನೆಗಳ ಲೇವಡಿ: ಸರ್ಕಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಂಡಸರು ಚುನಾವಣೆಗಿಂತ ಮುಂಚೆ ಕೊಟ್ಟ ಭರವಸೆಗಳನ್ನು ಈಡೇರಿಸುವುದಿಲ್ಲ. ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಆದರೆ ಅದರಲ್ಲಿ ಬಹುತೇಕ ಗ್ಯಾರಂಟಿಗಳು ಅರ್ಧಕ್ಕೆ ನಿಂತಿವೆ ಎಂದು ಮಹಿಳೆಯರ ಪರ ವಾದ ಮಾಡಿದ ತಂಡದ ಸದಸ್ಯರು ಸರ್ಕಾರದ ಗ್ಯಾರಂಟಿಗಳನ್ನು ಲೇವಡಿ ಮಾಡಿದರು.

ಇದಕ್ಕೂ ಮುನ್ನ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಪಾಲಕರ ಪಾದ ತೊಳೆದು ಪೂಜೆ ಮಾಡುವ ಮೂಲಕ ಗುರುವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವಪ್ಪ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಕ್ಯಾತನಹಳ್ಳಿ ಎಸ್.ದಯಾನಂದ್, ವೈ.ಪಿ.ಮಂಜು, ವೈ.ಜಿ.ರಘು, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net