

ಚಿಕ್ಕಬಳ್ಳಾಪುರ: ನಗರಸಭೆ ಚುನಾವಣೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಮೇಲುಗೈ ಸಾಧಿಸಲು ಹೊರಟಿರುವ ನಡುವೆ ಅದೇ ಪಕ್ಷದ ಸದಸ್ಯರು ಕೈಕೊಡುವ ಸಂಶಯ ವ್ಯಕ್ತವಾಗಿದೆ.
ಹೌದು! ಈಗಾಗಲೇ ಕಾಂಗ್ರೆಸ್‌ನ 6 ಸದಸ್ಯರು ಬಿಜೆಪಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದು, ಇನ್ನೂ ಹಲವರು ಬೆಳವಣಿಗೆ ನೋಡಿಕೊಂಡು ಪಕ್ಷಾಂತರಕ್ಕೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ಸಲಹೆ, ಎಚ್ಚರಿಕೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇದರಿಂದ ವಿಪ್ ಉಲ್ಲಂಸುವವರಿಗೆ ಕಠಿಣ ಕ್ರಮದ ಸಂದೇಶವನ್ನು ಬಹಿರಂಗವಾಗಿ ಸಾರುವ ಮಟ್ಟಿಗೆ ರಾಜಕೀಯ ಬೆಳವಣಿಗೆಗೆಳು ನಡೆಯುತ್ತಿವೆ.
ಅಯೋಗ್ಯರಿಗೆ ಹಣ ಕೊಡುವುದಿಲ್ಲ
ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಸದಸ್ಯರು ಪಕ್ಷ ನಿಷ್ಠೆ ತೋರಿ, ಸ್ವಪಕ್ಷೀಯ ಅಭ್ಯರ್ಥಿಗಳಿಗೆ ಮತ ಹಾಕಬೇಕು. ಯಾವುದೇ ಕಾರಣಕ್ಕೂ ಅಯೋಗ್ಯರಿಗೆ ಹಣ ಕೊಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಬಹಿರಂಗ ಹೇಳಿಕೆ ನೀಡಿರುವುದು ಸ್ವಪಕ್ಷೀಯರ ಪ್ರತಿಷ್ಠೆಯನ್ನು ಕೆಣಕಿದೆ. ಕಾಂಗ್ರೆಸ್‌ನ ಕೆಲ ಸದಸ್ಯರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಹಣದ ಆಸೆಯೇ ಪ್ರಮುಖ ಕಾರಣ. ಇದೇ ಮಾರ್ಗದಲ್ಲಿ ಹೋಗಲು ಕಾಂಗ್ರೆಸ್ ಬಯಸಿಲ್ಲ. ಅಯೋಗ್ಯ ಸದಸ್ಯರಿಗೆ ಹಣ ಕೊಟ್ಟು ಅಧಿಕಾರ ಪಡೆಯುವ ಬದಲು ಕ್ಷೇತ್ರದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸವಲತ್ತುಗಳಿಗೆ ಬಳಸುತ್ತೇವೆ ಎಂದು ತಿಳಿಸಿದ್ದಾರೆ. ಚುನಾವಣೆ ೋಷಣೆಗೂ ಮೊದಲು ಪಕ್ಷದ ವರಿಷ್ಠರು ನಿಯಮಾನುಸಾರ ವಿಪ್ ೋಷಿಸುತ್ತಾರೆ. ಅದರಂತೆ ಸ್ವಪಕ್ಷೀಯರು ಬಂದು ಸೂಚಿಸಿದವರಿಗೆ ಮತ ಹಾಕಬೇಕು. ಒಂದು ವೇಳೆ ಅಡ್ಡ ಮತದಾನ ಮಾಡಿದಲ್ಲಿ ಒಂದೆರಡು ವಾರದಲ್ಲಿ ಸದಸ್ಯತ್ವದಿಂದ ಕಿತ್ತು ಹಾಕಿಸಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಪಕ್ಷ ಬಿಡಿ, ಅಭಿವೃದ್ಧಿ ಬೆಂಬಲಿಸಿ
ಆಡಳಿತ ಪಕ್ಷದ ಸದಸ್ಯರು ಬೆಂಬಲಿಸಲು ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಸಂಸದ ಡಾ. ಕೆ.ಸುಧಾಕರ್, ಚಿಕ್ಕಬಳ್ಳಾಪುರ ನಗರದ ಅಭಿವೃದ್ಧಿ ದೃಷ್ಟಿಯಿಂದ ಚುನಾವಣೆಯಲ್ಲಿ ಪಕ್ಷಾತೀತವಾಗಿ ನಿರ್ಣಯ ಕೈಗೊಳ್ಳಬೇಕಾಗಿದೆ ಎಂಬ ಮಾತನ್ನು ಉಚ್ಚರಿಸುತ್ತಿದ್ದಾರೆ. ನಗರಸಭೆ ಅಧಿಕಾರಾವಧಿ ಇನ್ನು14 ತಿಂಗಳು ಇದೆ. ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ಆಡಳಿತ ಯಂತ್ರ ಸ್ತಬ್ಧಗೊಂಡಿದ್ದು ಇದಕ್ಕೆ ಚುರುಕು ಮುಟ್ಟಿಸಲು ಮಹತ್ತರವಾದ ನಿಲುವನ್ನು ತೋರಬೇಕಾಗಿದೆ. ಪಕ್ಷಾತೀತವಾಗಿ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆ ರಾಜಕೀಯ ಬೆಳವಣಿಗಳನ್ನು ಮೊದಲೇ ಊಹಿಸಲಾಗದ ಸ್ಥಿತಿಯಲ್ಲಿದ್ದು ಲಿತಾಂಶ ಬರುವವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ. ಇಲ್ಲಿ ಕಾಂಗ್ರೆಸ್‌ಗೆ ಬಹುಮತವಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲಾಗುತ್ತಿದೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ಡಾ ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ, ಚಿಕ್ಕಬಳ್ಳಾಪುರ
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆಲ್ಲುವಾಗ ಮರೆವು, ಸೋಲುವಾಗ ಕುದುರೆ ವ್ಯಾಪಾರ ಎನ್ನುವುದು ನೆನಪಿಗೆ ಬರುತ್ತದೆ. ತೆಲಂಗಾಣದಲ್ಲಿ ಶಾಸಕರನ್ನು ಖರೀದಿಸುತ್ತಿರುವುದು ಯಾವ ಪಕ್ಷದವರು? ಜನಪ್ರತಿನಿಧಿಗಳು ಸುಮ್ಮನೆ ಮನಸ್ಸಿಗೆ ಬಂದಂತೆ ಮಾತನಾಡಬಾರದು.
ಡಾ ಕೆ.ಸುಧಾಕರ್ ಸಂಸದ, ಚಿಕ್ಕಬಳ್ಳಾಪುರ
ಹಿಂದೆ ನಗರಸಭೆ ಸದಸ್ಯರು ಭ್ರಷ್ಟರು ಎಂಬ ಮಾತನ್ನು ಹೇಳಿದ್ದ ಶಾಸಕ ಪ್ರದೀಪ್ ಈಶ್ವರ್, ಈಗ ಅಯೋಗ್ಯ ಸದಸ್ಯರು ಎಂಬ ಪದ ಬಳಸಿರುವುದು ಸರಿಯಲ್ಲ. ಜನಪ್ರತಿನಿಧಿಗಳೆಲ್ಲರೂ ಜನರಿಂದ ಆಯ್ಕೆಯಾದವರು ಎಂಬುದನ್ನು ಮರೆತಂತೆ, ಅವಾಚ್ಯ ಶಬ್ದಗಳ ನಿಂದನೆಯ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದ್ದಾರೆ.
ನಾಗರಾಜ್ ನಗರಸಭೆ ಸದಸ್ಯ, ಚಿಕ್ಕಬಳ್ಳಾಪುರ