ಆಶಾ ಕಾರ್ಯಕರ್ತೆಯರಿಗೆ ಉದ್ಯೋಗಾತಂಕ?

31-07-rama-aasha
Published on

ಜನಸಂಖ್ಯೆ ಆಧಾರದ ಮೇಲೆ ಉಳಿಸಿಕೊಳ್ಳಲು ಸ್ಕೆಚ್​ > ಈಡೇರದ ವೇತನ ಭರವಸೆ

ಗಂಗಾಧರ್​ ಬೈರಾಪಟ್ಟಣ, ರಾಮನಗರ ರಾಷ್ಟ್ರೀಯ ಆರೋಗ್ಯ ಮಿಷನ್​ (ಎನ್​ಎಚ್​ಎಂ) ಅಡಿಯಲ್ಲಿ ಕಳೆದ 15 ವರ್ಷಗಳಿಂದಲೂ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುತ್ತಾ ಬಂದಿರುವ ಸಾವಿರಾರು ಆಶಾ ಕಾರ್ಯಕರ್ತೆಯರಲ್ಲಿ, ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗ ಸೂಚಿ ಉದ್ಯೋಗಾತಂಕ ಸೃಷ್ಟಿಸಿದೆ. ಗರ್ಭಿಣಿ, ಬಾಣಂತಿಯರು, ಮಗುವಿನ ಆರೋಗ್ಯ ಸೇರಿದಂತೆ ಹಲವಾರು ಕೆಲಸಗಳನ್ನು ಮನೆ ಬಾಗಿಲಿಗೆ ತಲುಪಿಸಿ, ಸಂಬಂಧಪಟ್ಟವರಿಗೆ ಅರಿವು ಮೂಡಿಸಿ ನೆರವು ನೀಡುವ ಕೆಲಸ ಮಾಡುತ್ತಿರುವ ಆಶಾಕಾರ್ಯಕರ್ತೆಯರನ್ನು ಈಗ ಜನಸಂಖ್ಯೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕೆಂದು ಹೊರಡಿಸಲಾಗಿದೆ ಎನ್ನುವ ಮಾರ್ಗಸೂಚಿ, ಉದ್ಯೋಗ ಕಳೆದುಕೊಳ್ಳುವ ಆತಂಕ ಆವರಿಸಿದೆ.

ಅಧಿಕಾರಿಗಳು ಹೇಳೋದು ಏನು?

ಸರ್ಕಾರ ಈಗ ಜನಸಂಖ್ಯೆಗೆ ಅನುಗುಣವಾಗಿ ಆಶಾ ಕಾರ್ಯಕರ್ತೆಯರನ್ನು ಉಳಿಸಿಕೊಳ್ಳುವ ಮತ್ತು ತೆಗೆದು ಹಾಕುವ ಕೆಲಸ ಮಾಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಯಾರನ್ನೂ ಕೆಲಸದಿಂದ ತೆಗೆದು ಹಾಕುವ ಸಂಬಂಧ ಸರ್ಕಾರದಿಂದ ನಿರ್ದೇಶನ ಬಂದಿಲ್ಲ. ಆದರೆ, ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿಯನ್ನಷ್ಟೇ ಕೇಳಿದೆ. ಇದರ ಮಾಹಿತಿಯನ್ನಷ್ಟೇ ನೀಡುತ್ತಿದ್ದೇವೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಈಗ ಬಂದಿರುವ ಮಾರ್ಗಸೂಚಿಯಂತೆ ಗುಡ್ಡಗಾಡು ಪ್ರದೇಶದಲ್ಲಿ 500-1000, ಗ್ರಾಮೀಣ ಭಾಗದಲ್ಲಿ 1-2 ಸಾವಿರ ಮತ್ತು ನಗರ ಪ್ರದೇಶದಲ್ಲಿ 2- 3 ಸಾವಿರ ಮಂದಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರನ್ನು ಉಳಿಸಿಕೊಳ್ಳಬೇಕು ಎನ್ನಲಾಗುತ್ತಿದೆ.

ಪ್ರಸ್ತುತ ಎಷ್ಟು ಜನಸಂಖ್ಯೆಗೆ ಎಷ್ಟು ಮಂದಿ ಆಶಾ ಕಾರ್ಯಕರ್ತೆಯರು ಇದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

ಆಗ ಇಲ್ಲದ್ದು ಈಗೇಕೆ?

15 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಆರೋಗ್ಯ ಮಿಷನ್​ ಯೋಜನೆಯಡಿ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳುವಾಗ ಒಂದು ಸಾವಿರ ಜನಸಂಖ್ಯೆಗೆ ಒಬ್ಬರು, ಅದೇ ಊರಿನ ಸೊಸೆ ಆಗಿರಬೇಕು, ಎರಡು ಮಕ್ಕಳ ತಾಯಿ ಆಗಿರಬೇಕು, ಓದಲು, ಬರೆಯಲು ಬರುವ ಮತ್ತು ಸಂವಹನ ಕಲೆ ಗೊತ್ತಿರುವರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮವನ್ನು ರೂಪಿಸಿತ್ತು. ಆದರೆ, ಆಗ ಇಲ್ಲದ ವಿದ್ಯಾರ್ಹತೆ ಪ್ರಶ್ನೆ ಈಗ ಏಕೆ ಎದ್ದಿದೆ ಎನ್ನುವ ಪ್ರಶ್ನೆಯನ್ನು ಆಶಾ ಕಾರ್ಯಕರ್ತೆಯರು ಮಾಡಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿಯೇ ಹಿಂದೆ ನೇಮಕ ಮಾಡಿಕೊಳ್ಳಲಾಗಿತ್ತು. ಹಿಂದೆ ಕೆಲ ಗ್ರಾಮಗಳಲ್ಲಿ ಜನಸಂಖ್ಯೆ ಒಂದು ಸಾವಿರಕ್ಕಿಂತ ಕಡಿಮೆ ಮಾಡಬಹುದಿತ್ತು. ಈಗ ಜನಸಂಖ್ಯೆ ಆಧಾರದಲ್ಲಿ ಆಶಾ ಕಾರ್ಯಕರ್ತೆಯರ ಸಂಖ್ಯೆಯನ್ನು ಗುರುತಿಸುತ್ತಿರುವುದು ಏಕೆ ಎಂಬ ಪ್ರಶ್ನೆಯನ್ನು ಈಗ ಮಾಡುತ್ತಿದ್ದಾರೆ.

ಸರ್ಕಾರ ನ್ಯಾಯ ಕೊಡಿಸಲಿ

ಆರೋಗ್ಯ ಇಲಾಖೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಉದ್ಯೋಗದ ಖಾತ್ರಿಯ ಬಗ್ಗೆ ಈಗ ಆತಂಕ ಸೃಷ್ಟಿಯಾಗಿದೆ. ಆದರೆ, ಹಿಂದೆ ಕೇಂದ್ರದ ವೇತನ ಸೇರಿಸಿ 10 ಸಾವಿರ ರೂ. ಮಾಸಿಕ ವೇತನ ನೀಡುವ ಭರವಸೆ ನೀಡಿದ್ದ ಸರ್ಕಾರ, ಈಗ ಇದನ್ನು ಈಡೇರಿಸಲಿ, ಅವೈಜ್ಞಾನಿಕವಾಗಿ ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣೆ ಮತ್ತು ಮೌಲ್ಯಮಾಪನವನ್ನು ಕೈ ಬಿಡಬೇಕು. ಜನಸಂಖ್ಯೆಯ ಮಿತಿಯನ್ನು ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದು ಹಾಕುವ ಕೆಲಸ ಮಾಡಬಾರದು. ಈ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಆತಂಕದಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ ಎಂಬ ಬೇಡಿಕೆಯನ್ನು ಕಾರ್ಯಕರ್ತೆಯರು ಇಟ್ಟಿದ್ದಾರೆ.

ಇದರ ಜತೆಗೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ರಾಜ್ಯವ್ಯಾಪಿ ಆಯಾ ಜಿಲ್ಲಾಮಟ್ಟದಲ್ಲಿ ಆ.12ರಿಂದ ಮೂರು ದಿನಗಳ ಕಾಲ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ.

ಜನಸಂಖ್ಯೆಗೆ ಅನುಗುಣವಾಗಿ ಆಶಾ ಕಾರ್ಯಕರ್ತೆಯರ ಮಾಹಿತಿಯನ್ನಷ್ಟೇ ಇಲಾಖೆ ಕೇಳಿದೆ. ಈ ಮಾಹಿತಿಯನ್ನು ನೀಡಲಾಗುತ್ತಿದೆ. ಯಾರನ್ನೂ ಕೆಲಸದಿಂದ ತೆಗೆದು ಹಾಕುವ ನಿರ್ದೇಶನ ಬಂದಿಲ್ಲ.

ಡಾ.ಬಿ.ಎಸ್​.ನಿರಂಜನ್​, ಡಿಎಚ್​ಒ, ಬೆಂಗಳೂರು ದಣ ಜಿಲ್ಲೆ.

ಆಶಾ ಕಾರ್ಯಕರ್ತೆಯರು ಆತಂಕದಲ್ಲಿಯೇ ಕೆಲಸ ಮಾಡುವ ವಾತಾವರಣವನ್ನು ಆರೋಗ್ಯ ಇಲಾಖೆ ನಿರ್ಮಾಣ ಮಾಡಿದೆ. ತರ್ಕಬದ್ಧಗೊಳಿಸುವ ನೆಪದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆಶಾಕಾರ್ಯಕರ್ತೆಯರು ಕೆಲಸ ನಿರ್ವಹಿಸುವ ಬಗ್ಗೆ ಈಗ ಮಾತನಾಡಲಾಗುತ್ತಿದೆ. 10 ಸಾವಿರ ರೂ.ವೇತನ ನೀಡುವ ತಾವೇ ಕೊಟ್ಟಿದ್ದ ಮಾತನ್ನು ಸರ್ಕಾರ ಮರೆತಿದೆ. ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗಸ್ಟ್​ನಲ್ಲಿ ಮತ್ತೆ ಹೋರಾಟ ಹಮ್ಮಿಕೊಂಡಿದ್ದೇವೆ.

ಉಮಾದೇವಿ, ರಾಜ್ಯ ಪದಾಧಿಕಾರಿ, ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net