ಅರಸೀಕೆರೆ ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ

IMG-20240822-WA0086
Published on

ಅರಸೀಕೆರೆ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ 26ನೇ ವಾರ್ಡ್‌ನ ಎಂ.ಸಮೀವುಲ್ಲಾ ಹಾಗೂ ಉಪಾಧ್ಯಕ್ಷರಾಗಿ ಐದನೇ ವಾರ್ಡ್‌ನ ಮನೋಹರ್ ಮೇಸ್ತ್ರಿ ಚುನಾಯಿತರಾಗಿದ್ದಾರೆ.


31 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್ 15 ಸದಸ್ಯ ಬಲ ಹೊಂದಿದ್ದು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ 31ನೇ ವಾರ್ಡ್‌ನ ಸುಜಾತಾ ರಮೇಶ್ ಹಾಗೂ ಬಿಜೆಪಿಯ ಆರನೇ ವಾರ್ಡಿನ ಅಭಿರಾಮಿ ಕಣಕ್ಕಿಳಿದಿದ್ದರು. ಜೆಡಿಎಸ್ ಚಿಹ್ನೆಯಡಿ ಗೆಲುವು ಸಾಧಿಸಿ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಎಂ.ಸಮೀವುಲ್ಲಾ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನ ಹಾಗೂ ಪ.ಜಾತಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮನೋಹರ್ ಮೇಸ್ತ್ರಿ ಉಮೇದುವಾರಿಕೆ ಸಲ್ಲಿಸಿದ್ದರು.


ಬಳಿಕ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪಕ್ಷದ ವಿಪ್ ಪಡೆದಿದ್ದರೂ 13 ಮಂದಿ ಜೆಡಿಎಸ್ ಹಾಗೂ ಒಬ್ಬ ಪಕ್ಷೇತರ ಸದಸ್ಯ ಸೇರಿ ಹದಿನಾಲ್ಕು ಸದಸ್ಯರು ಸಮೀವುಲ್ಲಾ ಹಾಗೂ ಮನೋಹರ್ ಮೇಸ್ತ್ರಿ ಪರ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಚುನಾವಣಾಧಿಕಾರಿಯಾಗಿದ್ದ ಮಾರುತಿ ಉಭಯ ಸ್ಥಾನಗಳ ಫಲಿತಾಂಶ ಪ್ರಕಟಿಸಿದರು.


ಐವರು ಬಿಜೆಪಿ, ಒಬ್ಬ ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯ ಸೇರಿದಂತೆ ಸುಜಾತಾ ರಮೇಶ್ ಹಾಗೂ ಅಭಿರಾಮಿ ತಲಾ ಏಳು ಮತ ಪಡೆದರು. ಕಾಂಗ್ರೆಸ್ ಚಿಹ್ನೆಯಡಿ ಗೆಲುವು ಸಾಧಿಸಿದ್ದ ಎಂ.ಆರ್.ವೆಂಕಟಮುನಿ ಮತ ಚಲಾಯಿಸಲಿಲ್ಲ. 30ನೇ ವಾಡ್‌ನ ಬಿಜೆಪಿ ಸದಸ್ಯೆ ಗೀತಾ ಹೇಮಂತ್ ಗೈರಾಗಿದ್ದರೆ, ಮತ್ತೊಬ್ಬ ಜೆಡಿಎಸ್ ಸದಸ್ಯ ಕೆ.ಎಂ.ಈಶ್ವರಪ್ಪ ಮತದಾನಕ್ಕೂ ಕೆಲ ಹೊತ್ತಿಗೆ ಮುನ್ನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜೀನಾಮೆ ನೀಡಿದ್ದರು.


ಮತದಾನದ ಹಕ್ಕು ಹೊಂದಿದ್ದ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಹೈಕೋರ್ಟ್‌ನ ದ್ವಿಸದಸ್ಯ ಪೀಠ ಏಳು ಸದಸ್ಯರ ಅನರ್ಹತೆ ತೀರ್ಪನ್ನು ಗುರುವಾರ ಎತ್ತಿಹಿಡಿದಿದೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಹೊರಗೆ ಜಮಾಯಿಸಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಂಡಾಯದ ಲಾಭ ಪಡೆಯುವಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಡೆಗೂ ಯಶಸ್ಸು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net