

ಸುಳ್ಯ: ತಾಲೂಕಿನ ಅರಂತೋಡು-ತೊಡಿಕಾನ-ಪಟ್ಟಿ ಮಾರ್ಗವಾಗಿ ಕೊಡಗಿನ ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಾಗಿ ಮುಂದಿನ ಬಜೆಟ್ನಲ್ಲಿ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.
ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಈ ರಸ್ತೆಗಾಗಿ ರಚನೆಗೊಂಡ ಹೋರಾಟ ಸಮಿತಿಯ ನೇತೃತ್ವದಲ್ಲಿ ತೊಡಿಕಾನ ದೇವಸ್ಥಾನದ ಸಭಾಭವನದಲ್ಲಿ ಆಯೋಜನೆಗೊಂಡ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಈ ರಸ್ತೆಯು ಮೀಸಲು ಅರಣ್ಯದ ಮೂಲಕ ಹಾದು ಹೋಗುತ್ತದೆ. ಹಾಗಿದ್ದರೂ ಕಾನೂನಿನಲ್ಲಿ ರಸ್ತೆ ಮಾಡುವ ಅವಕಾಶವಿದೆ. ಇದಕ್ಕಾಗಿ ಮುಖ್ಯಮಂತ್ರಿ, ಅರಣ್ಯ ಸಚಿವರಲ್ಲಿ ತಿಳಿಸಿ ಹೋರಾಟ ಮಾಡುತ್ತೇನೆ. ಕೇಂದ್ರ ಸರ್ಕಾರದ ಪ್ರತ್ಯೇಕ ಸಭೆ ನಡೆಸಿ ಕಾನೂನು ತೊಡಕು ನಿವಾರಿಸಿ ರಸ್ತೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಕೊಡಗು-ಧರ್ಮಸ್ಥಳ ಸಂಪರ್ಕಿಸುವ ರಸ್ತೆ ಇದಾಗಿದ್ದು, ನಮ್ಮನ್ನು ಒಂದು ಗೂಡಿಸುವ ಕೆಲಸವನ್ನು ದೇವರು ಮಾಡಲಿ. ಪೊನ್ನಣ್ಣ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವುದರಿಂದ ರಸ್ತೆಯ ಕನಸನ್ನು ನನಸು ಮಾಡುವ ಶಕ್ತಿ ಅವರಿಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಕೇಶವ ಅಡ್ತಲೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿದರು. ವಕೀಲ ದೀಪಕ್ ಕುತ್ತಮೊಟ್ಟೆ ವಂದಿಸಿದರು. ಭವಾನಿ ಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.