

* ಚುನಾವಣಾ ಲಿತಾಂಶದ ಲೆಕ್ಕಾಚಾರ
* ಸೋಲು-ಗೆಲುವಿನ ಪರಾಮರ್ಶೆ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಅಭ್ಯರ್ಥಿಗಳ ಸೋಲು-ಗೆಲುವು ಸರ್ಕಾರ ರಚನೆ ಬಗ್ಗೆ ಪರಾಮರ್ಶೆ ಶುರುವಾಗಿದೆ. ಗ್ರಾಮೀಣ, ನಗರ ಪ್ರದೇಶದ ಹೋಟೆಲ್, ಟೀ ಅಂಗಡಿಗಳು, ಅರಳಿಕಟ್ಟೆಗಳು, ನಗರದ ಬಸ್ ನಿಲ್ದಾಣ, ಪಾರ್ಕ್‌ಗಳು ರಾಜಕೀಯ ಚರ್ಚೆಯ ಪಡಸಾಲೆಗಳಾಗಿವೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ 2.68 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಸತತ ಮೂರು ಅವಧಿಗೆ ಸಂಸದರಾಗಿದ್ದ ಡಿ.ಕೆ.ಸುರೇಶ್ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದರು. ಡಿ.ಕೆ.ಸುರೇಶ್ ತೀವ್ರ ಹಣಾಹಣಿಯಲ್ಲಿ ಬಿರುಸಿನ ಪ್ರಚಾರದೊಡನೆ, ಪಾದರಸದಂತೆ ಕ್ಷೇತ್ರದಲ್ಲಿ ಓಡಾಡಿ ಅಬ್ಬರದ ಪ್ರಚಾರ ನಡೆಸಿದ್ದರು. ಆದರೆ, ಮತದಾರರು ಡಾ.ಸಿ.ಎನ್.ಮಂಜುನಾಥ್ ಅವರಿಗೆ ಜೈ ಎಂದಿದ್ದಾರೆ.
ಗ್ರಾಮೀಣ, ನಗರ ಪ್ರದೇಶದಲ್ಲಿ ಇವರಿಬ್ಬರ ಸೋಲು-ಗೆಲುವಿನ ಲೆಕ್ಕಾಚಾರವೇ ಈಗ ಪ್ರಮುಖ ಚರ್ಚಾ ವಿಷಯವಾಗಿದೆ.
ಕೇಂದ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಆರೋಗ್ಯ ಮಂತ್ರಿಯಾಗುವ ಅವಕಾಶ ಸಿಗಲಿದೇಯೇ? ಹಾಗೂ ಎಚ್.ಡಿ. ಕುಮಾರಸ್ವಾಮಿಗೆ ಸಚಿವಸ್ಥಾನ ಸಿಗಲಿದೆಯೇ? ಎಂಬ ಚರ್ಚೆ ಎಲ್ಲೆಲ್ಲೂ ಜೊರಾಗಿ ನಡೆಯುತ್ತಿದೆ.
ರಾಮನಗರ ತಾಲೂಕಿನ ಕೈಲಾಂಚ, ಕಸಬಾ ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ ನೀಡಿದ್ದಾರೆ. ಯಾವ ಬೂತ್‌ನಲ್ಲಿ ಯಾರಿಗೆ ಎಷ್ಟು ಮತ ಬಂದಿದೆ? ಗೆಲುವಿಗೆ ಕಾರಣಗಳೇನು?, ಕಾಂಗ್ರೆಸ್‌ಗೆ ಯಾವ ಬೂತ್‌ನಲ್ಲಿ ಮತ ಕಡಿಮೆಯಾಗಿದೆೆ? ಯಾವ ಕಾರಣಕ್ಕೆ ಮತಗಳು ಕಡಿಮೆಯಾಗಿವೆ ಎಂಬ ಚರ್ಚೆಗಳು ತಾಲೂಕಿನ ಗ್ರಾಮಗಳ ಜಗಲೀಕಟ್ಟೆ, ಅರಳೀಕಟ್ಟೆಗಳು, ಟೀ ಹೋಟೆಲ್‌ಗಳಲ್ಲಿ ನಿನ್ನೆ ಸಂಜೆಯಿಂದಲೇ ಆರಂಭವಾಗಿವೆ.
ಯಾವುದೇ ಚುನಾವಣೆ ಬಂತೆಂದರೆ ಸಾಕು ಗ್ರಾಮದ ಅರಳಿಕಟ್ಟೆಗಳು, ಟೀ ಅಂಗಡಿಗಳು ಹಿರಿಯರ ಚರ್ಚೆಯ ಕೇಂದ್ರಗಳಾಗುತ್ತವೆ. ಚರ್ಚೆಯಲ್ಲಿ ತೊಡಗಿ ಅಲ್ಲೇ ಅಭ್ಯರ್ಥಿಗಳ ಸೋಲು-ಗೆಲುವು, ಸರ್ಕಾರ ರಚನೆ ಲೆಕ್ಕಾಚಾರ ಬರೆಯುತ್ತಾರೆ. ಒಂದರ್ಥದಲ್ಲಿ ಯಾವುದೇ ಅಭ್ಯರ್ಥಿ ಗ್ರಾಮೀಣ ಪ್ರದೇಶದ ಬೂತ್‌ಗಳಲ್ಲಿ ಹೆಚ್ಚಿನ ಮತ ಪಡೆಯಲು ಇಂಥ ಚರ್ಚೆ ಮಾತುಕತೆಗಳೇ ಪೂರಕವಾಗುತ್ತವೆ. ಎಷ್ಟೋ ಸಂದರ್ಭದಲ್ಲಿ ಅಭ್ಯರ್ಥಿ ಹಣೆಬರಹ ಕೂಡ ಇಂಥ ಜಾಗದಲ್ಲೇ ನಿರ್ಧರಿಸಲ್ಪಡುತ್ತದೆ. ಒಟ್ಟಾರೆ ಅರಳೀಕಟ್ಟೆ, ಟೀ ಅಂಗಡಿ, ಜಗುಲಿಗಳಲ್ಲಿ ದೇಶದ ಚುಕ್ಕಾಣಿ ಹಿಡಿಯುವ ಪ್ರಧಾನಮಂತ್ರಿ ಅಧಿಕಾರ ಗದ್ದುಗೆ ಏರುವ ತನಕ ಚರ್ಚೆ ನಡೆಯುತ್ತಿವೆ.