

ವಿಜಯವಾಣಿ ಸುದ್ದಿಜಾಲ ಶಹಾಪುರ
ಭಾರಿ ಕುತೂಹಲ ಕೆರಳಿಸಿದ್ದ ಇಲ್ಲಿನ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಜರುಗಿದ ಚುನಾವಣೆಯಲ್ಲಿ ಸಿದ್ದಣ್ಣ ಚಂದ್ರಶೇಖರ್ ಆರಬೋಳ ಅವರು ೪೦೪ ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾದರು.
ಪ್ರತಿಸ್ಪರ್ಧಿ ಮಹೇಶಚಂದ್ರ ಚಂದ್ರಶೇಖರ್ ಆನೆಗುಂದಿ ಅವರು ೨೭೫ ಮತಗಳನ್ನು ಪಡೆಯುವ ಮೂಲಕ ಸೋಲುಂಡರು. ಭಾನುವಾರ ಬೆಳಗ್ಗೆಯಿಂದ ಸಂಜೆ ೪ ಗಂಟೆಯವರೆಗೆ ನಡೆದ ಮತದಾನದಲ್ಲಿ ೭೫೨ಮತದಾರರ ಪೈಕಿ ೬೮೧ ಜನರು ಮತ ಚಲಾಯಿಸಿದ್ದು, ಅವರಲ್ಲಿ ೫೬೮ಪುರುಷರು,೧೧೩ ಮಹಿಳೆಯರು ಮತ ಹಕ್ಕು ಚಲಾಯಿಸಿದ್ದರು.
೧೨೯ ಮತಗಳ ಅಂತರದಿAದ ಆರಬೋಳ ಜಯ ಸಾಧಿಸಿದ್ದಾರೆ. ಶಹಾಪುರ ತಾಲೂಕು ಘಟಕದ ಚುನಾವಣೆಯಲ್ಲಿ ೨೦ ಜನರು ಕಾರ್ಯಕಾರಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಅಧ್ಯಕ್ಷ ಸ್ಥಾನಕ್ಕೂ ಅವಿರೋಧ ಆಯ್ಕೆ ಮಾಡಬೇಕೆಂದು ಸಮಾಜದ ಹಿರಿಯ ನಡೆಸಿದ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಭಾನುವಾರ ಚುನಾವಣೆ ನಿಗದಿಯಾಗಿತ್ತು.
ಮತಗಳ ಎಣಿಕೆ ನಂತರ ಸಿದ್ದಣ್ಣ ಆರಬೋಳ ಆಯ್ಕೆಯನ್ನು ಚುನಾವಣಾಧಿಕಾರಿ ಕಲ್ಲಯ್ಯಾ ಸ್ವಾಮಿ ಚಟ್ನಳ್ಳಿ ಅಧಿಕೃತವಾಗಿ ಘೋಷಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕುಗಳಲ್ಲಿ ಮಾತ್ರ ಚುನಾವಣೆ ನಡೆದಿದೆ. ಉಳಿದೆಡೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಫಲಿತಾಂಶ ಪ್ರಕಟಗೊಳ್ಳುತ್ತಲೇ ಆರಬೋಳ ಹಾಗೂ ತಂಡದವರು ಭರ್ಜರಿಯಾಗಿ ವಿಜಯೋತ್ಸವ ಆಚರಿಸಿದರು.