ಕಲಾಸೇವೆ ಜತೆಗೆ ಪುನೀತ್​ ಸಾಮಾಜಿಕ ಸೇವೆ ಅನನ್ಯ: ಜ್ಯೋತಿಗಣೇಶ್​ ಬಣ್ಣನೆ

Mayura_Vedike
Published on

ತುಮಕೂರು: ಮನುಷ್ಯನ ಸಾಧನೆ, ಆತನ ಸಮಾಜ ಸೇವೆಗಳು ಸಾವಿನ ನಂತರವು ಜನ ಕೊಂಡಾಡುವಂತಿರಬೇಕು. ಇದಕ್ಕೆ ನಮ್ಮೆದುರಿಗ ನಿದರ್ಶನ ನಟ ಡಾ.ಪುನೀತ್​ ರಾಜಕುಮಾರ್​ ಎಂದು ನಗರ ಶಾಸಕ ಜಿ.ಬಿ.ಜೋತಿಗಣೇಶ್​ ಹೇಳಿದರು.

ನಗರದ ಎಸ್​.ಎಸ್​.ಪುರಂ ಮಯೂರು ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಡಾ.ಪುನೀತ್​ರಾಜಕುಮಾರ್​ ಅವರ 50ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತ್​ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಬಲಗೈನಲ್ಲಿ ಕೊಟ್ಟ ದಾನ ಎಡಗೈಗೆ ಗೊತ್ತಾಗದಂತೆ ಪುನೀತ್​ ರಾಜಕುಮಾರ್​ ಬದುಕಿದ್ದರು. ಅವರು ಸಾಯುವವರೆಗೂ ಮಾಡಿದ ದಾನ, ಧರ್ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಪುನೀತ್​ ಅವರ ಸಮಾಜ ಸೇವೆ ಇಡೀ ಯುವ ಸಮೂಹಕ್ಕೆ ಮಾದರಿ ಎನಿಸಿದೆ ಎಂದರು.

ಓರ್ವ ಕಲಾವಿದರಾಗಿ, ಸಮಾಜ ಸೇವಕರಾಗಿ ಪುನೀತ್​ರಾಜಕುಮಾರ್​ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟು ಹೋಗಿದ್ದಾರೆ. ಬಾಲನಟನಾಗಿ ಚಿತ್ರರಂಗ ಪ್ರವೇಶ ಮಾಡಿ ಒಳ್ಳೆಯ ಸಾಮಾಜಿಕ ಸಂದೇಶಗಳಿರುವ ಸಿನಿಮಾ ಮಾಡಿ, ತಂದೆ ಡಾ.ರಾಜಕುಮಾರ್​ರನ್ನೇ ಮೀರಿ ಬೆಳೆದರು. ಕಲಾಸೇವೆ ಜತೆಗೆ ಪುನೀತ್​ ಸಾಮಾಜಿಕ ಸೇವೆಯನ್ನು ಅವರ ಕುಟುಂಬ ಮುಂದುವರೆಸಿಕೊಂಡು ಹೋಗುವ ಮೂಲಕ ಅವರನ್ನು ಮತ್ತಷ್ಟು ಜೀವಂತವಾಗಿಡಲು ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿಯೇ ಅಲ್ಲದೆ ವಿಶ್ವದಲ್ಲಿಯೇ ಪುನೀತ್​ ರಾಜುಕುಮಾರ್​ ಅಭಿಮಾನಿಗಳಿದ್ದಾರೆ ಎಂದು ತಿಳಿಸಿದರು.

ಮಯೂರ ಯುವ ವೇದಿಕೆಯ ಅಧ್ಯಕ್ಷ ಪಿ.ಸದಾಶಿವಯ್ಯ ಮಾತನಾಡಿ, ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿರುವ ಪುನೀತ್​ ರಾಜಕುಮಾರ್​ ಅವರ 50ನೇ ಹುಟ್ಟು ಹಬ್ಬವನ್ನು ನಮ್ಮ ಮಯೂರು ಯುವ ವೇದಿಕೆಯಿಂದ ಆಚರಿಸ ಲಾಗುತ್ತಿದೆ. ಕಲಾವಿದರಾಗಿಯೇ ಅಲ್ಲ, ಸಮಾಜ ಸೇವಕರಾಗಿಯೂ ಪುನೀತ್​ ಸಹಸ್ರಾರು ಜನರ ಬಾಳಿಗೆ ಬೆಳಕಾಗಿದ್ದಾರೆ. ಅವರ ಕಲಾ ಸೇವೆ ಮತ್ತು ಸಮಾಜ ಸೇವೆ ಇತರರಿಗೆ ಮಾದರಿಯಾಗಲಿ, ಕುಟುಂಬದವರು ಅವರ ಸಮಾಜಮುಖಿ ಕೆಲಸಗಳನ್ನು ಮುಂದುವರೆಸಲು ಭಗವಂತ ಶಕ್ತಿ ನೀಡಲಿ ಎಂದರು.

ಮಯೂರ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್​.ಆರ್​.ಸ್ವಾಮಿ ಮಾತನಾಡಿ,ನಮ್ಮ ವೇದಿಕೆ ಆರಂಭದಿಂದಲೂ ಡಾ.ರಾಜ್​, ಪುನೀತ್​ ರಾಜಕುಮಾರ್​ ಅವರ ಹುಟ್ಟು ಹಬ್ಬ, ಪುಣ್ಯಸ್ಮರಣೆ ಕಾರ್ಯಕ್ರಮಗಳ ಜತೆಗೆ, ಅವರ ಚಲನಚಿತ್ರಗಳು ವಿಜಯೋತ್ಸವಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪುನೀತ್​ ರಾಜಕುಮಾರ್​ ಅವರ 50ನೇ ಹುಟ್ಟು ಹಬ್ಬದ ಅಂಗವಾಗಿ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ, ಇನ್ನಿತರ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಕ್​ ಕತ್ತರಿಸಿ, ಪುನೀತ್​ ಅಭಿಮಾನಿಗಳು, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಸ್ತೂರ ಬಾ ಆಸ್ಪತ್ರೆಯ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ನಡೆಸಲಾಯಿತು.ಈ ವೇಳೆ ಸಿ.ಬಿ.ಜಗದೀಶ್​, ರಾಜಕುಮಾರ್​ ಗುಪ್ತ, ರವಿ ಜಂಗಾವಿ,ವಿನಯ್​ ಜೈನ್​, ಉಗಮಶ್ರೀನಿವಾಸ್​,ಚಂದ್ರು, ದಾಸಣ್ಣ,ಮನೋಹರಬಾಬು, ದಿನೇಶಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net