

ಗದಗ: ನಮ್ಮ ದೇಶಕ್ಕೆ ಭಾರತ ಎಂಬ ಅಮೂಲ್ಯ ಹೆಸರನ್ನು ಮರು ನಾಮಕರಣಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ವಿದೇಶಿ ಮನಸ್ಥಿತಿಯವರು ಮಾತ್ರ ಈ ನಿರ್ಧಾರವನ್ನು ವಿರೋಧಿಸುತ್ತಾರೆ ಎಂದು ಬಿಜೆಪಿ ಮುಖಂಡ ವಿಜಯಕುಮಾರ ಗಡ್ಡಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವೇದ, ಪುರಾಣಗಳಲ್ಲೂ ಭಾರತ ಎಂಬ ಹೆಸರೇ ಉಲ್ಲೇಖವಿದೆ. ವಿದೇಶಿಗರು ಈ ದೇಶಕ್ಕೆ ಬಂದ ನಂತರ ಇಂಡಿಯಾ ಎಂಬ ಹೆಸರು ಪ್ರಸಿದ್ಧಿಯಾಯಿತು.
ಬ್ರಿಟಿಷರು ಇಂಡಿಯಾ ಎಂಬ ಹೆಸರನ್ನೇ ಅಧಿಕೃತವಾಗಿಸಿದ ಫಲವಾಗಿ ಈಗಲೂ ಸಹ ಅದೇ ಪ್ರಭಾವ ಉಳಿದುಕೊಂಡಿದೆ. ರಾಷ್ಟ್ರೀಯತೆಯ ಗಂಧ-ಗಾಳಿ ಗೊತ್ತಿಲ್ಲದ ಅವಕಾಶವಾದಿಗಳಾದ ಪ್ರತಿಪಕ್ಷಗಳೆಲ್ಲ ಸೇರಿ ತಮ್ಮ ಗುಂಪಿಗೆ ಇಂಡಿಯಾ ಎಂದು ಹೆಸರಿಟ್ಟುಕೊಂಡಿರುವುದು ವಿದೇಶಿ ಮನಸ್ಥಿತಿಯೇ ಆಗಿದ. ದೇಶವನ್ನು ಒಡೆದು ಆಳುವ ಇಂಗ್ಲಿಷರ ನೀತಿಯನ್ನು ಅನುಸರಿಸುತ್ತಿರುವ ಇಂಥವರಿಗೆ ಭಾರತ ಎಂಬ ಪದದ ಮಹತ್ವ ಗೊತ್ತಾಗುವುದಿಲ್ಲ. ಬಾಹ್ಯಾಕಾಶ, ಆರ್ಥಿಕತೆ, ವಿಶ್ವಶಾಂತಿ, ತಂತ್ರಜ್ಞಾನ, ವಿಪತ್ತು ನಿರ್ವಹಣೆ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ತನ್ನದೇ ಛಾಪು ಮೂಡಿಸುತ್ತ ನಮ್ಮ ದೇಶ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯ ಉತ್ತುಂಗ ತಲುಪುತ್ತಿದೆ ಎಂದು ತಿಳಿಸಿದ್ದಾರೆ.