

ತುಮಕೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಹಾಗೂ ಅರ್ಜಿ ಸಲ್ಲಿಕೆಯ ವಯೋಮಿತಿ ಹೆಚ್ಚಿಸುವಂತೆ ಆಗ್ರಹಿಸಿ ಜಿಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಬಿಜಿಎಸ್ ವೃತ್ತದಲ್ಲಿ ಶುಕ್ರವಾರ ಸಮಾವೇಶಗೊಂಡಿದ್ದ ನೂರಾರು ನಿರುದ್ಯೋಗಿ ಯುವಕರು ಜಿಲ್ಲಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ತೆರಳಿ ಸಚಿವ ಡಾ.ಜಿ.ಪರಮೇಶ್ವರ್ಗೆ ಮನವಿ ಸಲ್ಲಿಸಿದರು. ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕೆಇಎ ಹಾಗೂ ಕೆಪಿಎಸ್ಸಿ ಶುಲ್ಕ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದ ವಿವಿಧ ಇಲಾಖೆೆಗಳಲ್ಲಿ ಮತ್ತು ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಸ್ಟೇಬಲ್, ಪಿಎಸ್ಐ ಸೇರಿದಂತೆ ಹಲವು ಹುದ್ದೆಗಳಿಗೆ ವಯೋಮಿತಿ ಹೆಚ್ಚಿಸಿ ನೇಮಕಾತಿ ಆರಂಭಿಸುವಂತೆ ಸಮಿತಿಯ ಪ್ರತಿಭಟನಾನಿರತರು ಒತ್ತಾಯಿಸಿದರು.
ಹಲವು ವರ್ಷಗಳು ಕಳೆದರೂ ಈವರೆಗೆ ಯಾವುದೇ ನೇಮಕಾತಿ ಆಗದೇ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ನೇಮಕಾತಿಯಾಗದೇ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಏಳೆಂಟು ವರ್ಷಗಳಿಂದ ಎಫ್ಡಿಎ, ಎಸ್ಡಿಎ, ಪಶು ವೈದ್ಯರು, ಭೂ ಸರ್ವೇ ಸೇರಿದಂತೆ ಬಹುತೇಕ 40ಕ್ಕೂ ಅಧಿಕ ಇಲಾಖೆಗಳಲ್ಲಿ ಸುಮಾರು 2.80 ಲಕ್ಷ ಸಾವಿರ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಮಾಡಿಲ್ಲ ಎಂದು ಬೇಸರಿಸಿದರು.
ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಅನುವಾದದಲ್ಲಿ ಸಾಕಷ್ಟು ತಪ್ಪುಗಳಿದ್ದು, ಅಭ್ಯರ್ಥಿಗಳು ಗೊಂದಲಕ್ಕೀಡಾಗಿದ್ದರು. ಆದ್ದರಿಂದ ಈ ಪರೀಕ್ಷೆಯನ್ನು ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಅನೇಕ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಆಗದ ಕಾರಣ ಸಾವಿರಾರು ವಿದ್ಯಾರ್ಥಿಗಳು ವಯೋಮಿತಿ ಮೀರಿದೆ. ವಯೋಮಿತಿ ಕನಿಷ್ಠ 5 ವರ್ಷ ಸಡಿಲಿಕೆ ಮಾಡಿ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಪ್ರತಿಭಟನಾನಿರತರು ಸಚಿವ ಡಾ.ಜಿ.ಪರಮೇಶ್ವರಗೆ ಪದಾಧಿಕಾರಿಗಳು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸುನೀಲ್, ರಾವೇಂದ್ರ, ಅನಿಲ್, ವಿನುತಾ, ಎಂ.ಆರ್.ಪುಷ್ಟಾ, ಅಪು$್ಪ ಪಾಟೀಲ, ಲಾವಣ್ಯ, ಶ್ರೀನಿವಾಸಮೂರ್ತಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದರು.
ಪ್ರತಿಭಟನಾನಿರತರ ಮೇಲೆ ಪೊಲೀಸ್ ದಬ್ಬಾಳಿಕೆ!?
ಉದ್ಯೋಗಬಯಸಿ ಸಾಂಕೇತಿಕವಾಗಿ ಪ್ರತಿಭಟನೆಗೆ ಮುಂದಾಗಿದ್ದ ಯುವಕರ ಮೇಲೆ ಪೊಲೀಸ್ ಅಧಿಕಾರಿಗಳು ದಬ್ಬಾಳಿಕೆ ನಡೆಸಿರುವ ವೀಡಿಯೋ ವೈರಲ್ ಆಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ಹಾಜರಾಗಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಸರ್ಕಾರದ ಪರವಾಗಿ ಮನವಿ ಸ್ವೀಕರಿಸಬೇಕು ಎಂದು ಪ್ರತಿಭಟನಾನಿರತರು ಪಟ್ಟುಹಿಡಿದಾಗ ಪೊಲೀಸರು ಬಲಪ್ರಯೋಗಿಸಿ ಗುಂಪು ಚದುರಿಸಿದ್ದಾರೆ.
ಯುವತಿಯರು ರಸ್ತೆಯಲ್ಲಿ ಕುಳಿತು ಘೋಷಣೆ ಕೂಗುವಾಗಲೂ ಡಿವೈಎಸ್ಸಿ ಚಂದ್ರಶೇಖರ್ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ. ನಗರ ಠಾಣೆ ಸಿಪಿಐ ಅವಿನಾಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದವರನ್ನು ಎತ್ತಿಕೊಂಡು ಜೀಪಿಗೆ ಹಾಕಿ ಅಲ್ಲಿದ್ದವರನ್ನು ಚದುರಿಸಿ, ಗೃಹ ಸಚಿವರು ಆಗಮಿಸುವ ಮುಂಚೆ ಸ್ಥಳದಲ್ಲಿ ಯಾರೂ ಇಲ್ಲದಂತೆ ನೋಡಿಕೊಂಡರು.