

ಬೈಂದೂರು: ಉಪ್ಪುಂದ ವೈದ್ಯರ ಮನೆಯ ಗೋಪಾಲ ವೈದ್ಯ ಮತ್ತು ಕಲ್ಪನಾ ದಂಪತಿ ಪುತ್ರ ಯು.ಆದರ್ಶ ವೈದ್ಯ ಅವರು ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಅಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ 28ರ ಹರೆಯದ ಆದರ್ಶ ಅವರು ನೌಕರಿ ತ್ಯಜಿಸಿ ದೇಶಸೇವೆ ಮಾಡುವ ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಭಾರತೀಯ ಸೇನೆಯ ನೇಮಕಾತಿ ಪತ್ರ ಕೈಸೇರಿದ ಬಳಿಕ ಇಂಜಿನಿಯರ್ ವೃತ್ತಿಗೆ ರಾಜೀನಾಮೆ ನೀಡಿ, ಸೇನಾ ತರಬೇತಿಗೆ ಚೆನ್ನೈಗೆ ತೆರಳಿದ ಅವರು ಒಂದು ವರ್ಷದ ಕಠಿಣ ತರಬೇತಿ ಮುಗಿಸಿ ಲೆಫ್ಟಿನೆಂಟ್ ಆಗಿ ಪದಗ್ರಹಣ ಹೊಂದಿದರು. ಬಳಿಕ ಆರ್ಮಿ ಏವಿಯೇಷನ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪೈಲಟ್ ತರಬೇತಿಗೆ ಆಯ್ಕೆಯಾದರು. ಮೊದಲಿಗೆ 15ನೇ ಆರ್ಮ್‌ಡ್ ರೆಜಿಮೆಂಟ್‌ಗೆ ಸೇರಿ ಪಂಜಾಬ್‌ನಲ್ಲಿ ಕೆಲಸ ಮಾಡಿದರು. ಅನಂತರ ಒಂದು ವರ್ಷದ ಪೈಲಟ್ ಮುಗಿಸಿ ತರಬೇತಿ ನಾಸಿಕ್‌ನಲ್ಲಿ ನಡೆದ ಸಮಾರಂಭದಲ್ಲಿ ಲೆಫ್ಟಿನೆಂಟ್ ಜನರಲ್ ಎ.ಕೆ.ಸೂರಿ ಅವರಿಂದ ತೇರ್ಗಡೆ ಪ್ರಮಾಣ ಪತ್ರ ಪಡೆದಿದ್ದರು. ಈ ಅವಧಿಯಲ್ಲಿ ಈ ತರಬೇತಿ ಪೂರ್ಣಗೊಳಿಸಿದ ರಾಜ್ಯದ ಏಕೈಕ ಅಧಿಕಾರಿ ಆದರ್ಶ ವೈದ್ಯ.