

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಸರ್ಕಾರ ಇದೀಗ ಎಂದಿನಂತೆ ವ್ಯವಸ್ಥಾಪನಾ ಸಮಿತಿ ರಚನೆಗೆ ಮುಂದಾಗಿದೆ.
ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅವಧಿ ಕಳೆದ ಮಾರ್ಚ್‌ಗೆ ಕೊನೆಗೊಂಡಿತ್ತು. ಬಳಿಕದ ಬೆಳವಣಿಗೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರದ ಹಂತದಲ್ಲಿ ಉತ್ಸುಕತೆ ಹೊಂದಿರುವ ಬಗ್ಗೆ ಮಾಹಿತಿ ಹರಿದಾಡಿತ್ತು. ಈ ಬೆಳವಣಿಗೆ ನಡುವೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒಂದು ಕಡೆಯಿಂದ ವಿರೋಧ ವ್ಯಕ್ತವಾಗಿ ಸರ್ಕಾರದ ಸಚಿವರಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸದೆ ವ್ಯವಸ್ಥಾಪನಾ ಸಮಿತಿಯನ್ನೇ ರಚಿಸುವಂತೆ ಮನವಿ ಮಾಡಲಾಗಿತ್ತು. ಸ್ಥಳೀಯ ಕಾಂಗ್ರೆಸ್ ಪ್ರಮುಖರು ಬೆಂಗಳೂರಿಗೆ ತೆರಳಿ ಅಭಿವೃದ್ಧಿ ಪ್ರಾಧಿಕಾರ ಬದಲು ವ್ಯವಸ್ಥಾಪನಾ ಸಮಿತಿಯನ್ನೇ ರಚಿಸುವಂತೆ ಸರ್ಕಾರದ ಮನವೊಲಿಸಿದ್ದರು. ಪ್ರಾಧಿಕಾರದಿಂದ ಆಗುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು ಎಂದು ತಿಳಿದುಬಂದಿದೆ.
ಇದೀಗ ಸರ್ಕಾರ ಪ್ರಾಧಿಕಾರ ರಚನೆ ಸದ್ಯದ ಮಟ್ಟಿಗೆ ಕೈಬಿಟ್ಟಿದ್ದು, ಮತ್ತೆ ವ್ಯವಸ್ಥಾಪನಾ ಸಮಿತಿ ರಚನೆಗೆ ಮುಂದಾಗಿದೆ. ಅದರಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯತ್ವಕ್ಕೆ ಆಸಕ್ತ ಭಕ್ತರಿಂದ ಅರ್ಜಿ ಆಹ್ವಾನಿಸಿ ಸರ್ಕಾರದ ಪ್ರಕಟಣೆ ಹೊರಡಿಸಿದೆ. ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಕನಿಷ್ಠ 25 ವರ್ಷ ಮೇಲ್ಪಟ್ಟ ಭಕ್ತರು ಸದಸ್ಯತ್ವ ಕೋರಿ ಅರ್ಜಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಆಗಸ್ಟ್ 3ರ ಒಳಗೆ ಇಲಾಖೆಗೆ ನೇರವಾಗಿ ಸಲ್ಲಿಸಲು ಸೂಚಿಸಲಾಗಿದೆ.