

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಜೂನ್ 1ರಿಂದ 30ವರೆಗೆ ಕರೆಯಲಾಗಿದ್ದ ಅರ್ಜಿ ಆಹ್ವಾನ ಆದೇಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ.
2020-21ನೇ ಸಾಲಿನಲ್ಲಿ ಕರೆಯಲಾಗಿದ್ದ ಪಿಎಸ್ಐ (ಸಿವಿಲ್) 431 ಮತ್ತು ಕಲ್ಯಾಣ ಕರ್ನಾಟಕ- 125 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಜೂ.1ರಿಂದ 30 ವರೆಗೆ ಅರ್ಜಿ ಸಹ ಅಹ್ವಾನಿಸಲಾಗಿತ್ತು. ಆಡಳಿತಾತ್ಮಕ ಕಾರಣಗಳಿಂದಾಗಿ ಅರ್ಜಿ ಆಹ್ವಾನ ದಿನಾಂಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್ ತಿಳಿಸಿದ್ದಾರೆ.
ಇತ್ತೀಚೆಗೆ ಪಿಎಸ್ಐ ಹುದ್ದೆಗಳ ಆಕಾಂಕ್ಷಿಗಳ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 28ರಿಂದ 30ಕ್ಕೆ ಮತ್ತು ಎಸ್ಸಿ-ಎಸ್ಟಿಗೆ 30ರಿಂದ 32 ವರ್ಷಕ್ಕೆ ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲೇ ಪಿಎಸ್ಐಗಳ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದ ಪರಿಣಾಮ ವಯೋಮಿತಿ ಸಡಿಲಿಕೆ ಅನ್ವಯ ಆಗುತ್ತಿರಲಿಲ್ಲ. ಅದಕ್ಕಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಕೋವಿಡ್-19 ಲಾಕ್ಡೌನ್ ಜೂ.30ರ ವರೆಗೆ ವಿಸ್ತರಣೆಗೊಂಡ ಪರಿಣಾಮ ಅರ್ಜಿ ಆಹ್ವಾನ ದಿನಾಂಕ ರದ್ದು ಮಾಡಲಾಗಿದೆ ಎನ್ನಲಾಗಿದೆ.