

ಹೊನ್ನಾಳಿ: ತಾಲೂಕಿನ ಸಾಸ್ವೇಹಳ್ಳಿ ಗ್ರಾಮದ ಜಾಮಿಯಾ ಮಸೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ, ಈ ಬಗ್ಗೆ ವಕ್ಪ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಭ್ರಷ್ಟಾಚಾರದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಂಗಳವಾರ ಗ್ರಾಮದ ಕೆಲ ಮುಸ್ಲಿಂ ಮುಖಂಡರು ತಹಸೀಲ್ದಾರ್ ಪಟ್ಟರಾಜಗೌಡ ಅವರಿಗೆ ಮನವಿ ಸಲ್ಲಿಸಿದರು.
ಮಸೀದಿಯ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸಿ ಲೆಕ್ಕಪತ್ರ ನೀಡುವಂತೆ ವಕ್ಪ್ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ, ನಮಗೆ ನ್ಯಾಯ ನೀಡಿ. ಇದಕ್ಕೂ ಮುನ್ನ ಮಸೀದಿಯ ಆಡಳಿತ ಮಂಡಳಿಯವರಿಗೂ ಮನವಿ ಮಾಡಿದ್ದೆವು ಎಂದು ದೂರಿದರು.
ಈ ವಿಚಾರವಾಗಿ ವಕ್ಪ್, ಹೊನ್ನಾಳಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಿ, ಅವರಿಂದಲೂ ಪತ್ರ ವ್ಯವಹಾರ ಮೂಲಕ ಆಡಿಟ್ ಮಾಡಿಸಿಲ್ಲ, ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ ಮಾಡಿ ಹಣ ದುರುಪಯೋಗವಾಗಿದೆ, 30 ದಿನಗಳ ಒಳಗೆ ಎಲ್ಲ ದಾಖಲಾತಿ ಹಸ್ತಾಂತರಿಸುವಂತೆ ಸೂಚಿಸಿದ್ದರು. ಆದರೂ ದಾಖಲೆಗಳನ್ನು ಆಡಳಿತಾಧಿಕಾರಿಗಳಿಗೆ ನೀಡಿಲ್ಲ ಎಂದರು.
ಮುಖಂಡರಾದ ಅಬುಸಾಲೆಹ, ವಜೀರ್ ಸಾಬ್, ಅಮ್ಜದ್ ಆಲಿಖಾನ್, ಸಮಿಉಲ್ಲ, ಜಾಫರ್, ಮಹಮ್ಮದ್ ಹನೀಫ್, ಮೆಹಬೂಬ್ ಆಲಿಖಾನ್, ನಸರುಲ್ಲ, ಮಹಮ್ಮದ್ ಪಸರುಲ್ಲ ಇತರರು ಇದ್ದರು.