ಬೆಳೆ ಸಮೀಕ್ಷೆಗೆ ರೈತರ ನಿರಾಸಕ್ತಿ

FotoJet (2)
Published on

ನೋಂದಣಿ ಕಾರ್ಯ ಬಿರುಸಾಗಿದ್ದರೂ ಸಾಧನೆ ಕುಂಠಿತ | ಜಾಗೃತಿ ಮೂಡಿಸಲು ಮುಂದಾದ ಅಧಿಕಾರಿಗಳು

ಚಿಕ್ಕಬಳ್ಳಾಪುರ : ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ಮಾಹಿತಿಯನ್ನು ನೋಂದಾಯಿಸುವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ರೈತರು ಮಾಹಿತಿಯನ್ನು ಸ್ವಯಂ ದಾಖಲಿಸಲು ಕೃಷಿ ಇಲಾಖೆ ಬೆಳೆ ಸಮೀಕ್ಷೆ ಮೊಬೈಲ್ ಆಪ್ 2024-25 ಬಿಡುಗಡೆಗೊಳಿಸಿದೆ. ಇದರ ಉಪಯೋಗ ಪಡೆದುಕೊಳ್ಳಬೇಕು. ಪ್ರಸ್ತುತ ಹೆಚ್ಚಿನ ರೈತರು ಸಮೀಕ್ಷೆಗೆ ಆಸಕ್ತಿ ತೋರುತ್ತಿಲ್ಲ. ಸಾಧನೆ ಕುಂಠಿತಗೊಂಡಿದ್ದು ಇದರಿಂದ ಸಮೀಕ್ಷಾ ಕಾರ್ಯದ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.


ಬೆಳೆ ಸಮೀಕ್ಷೆಗೆ ಅನುಕೂಲ
ಬೆಳೆ ಸಮೀಕ್ಷೆ ಮಾಹಿತಿಯು ಸರ್ಕಾರದ ವಿವಿಧ ಯೋಜನೆಗಳು ಮತ್ತು ಸವಲತ್ತುಗಳನ್ನು ಒದಗಿಸಲು ಸಹಕಾರಿಯಾಗಿದೆ. ಪಹಣೆಯಲ್ಲಿ ಬೆಳೆ ವಿವರ ದಾಖಲಿಸಲು, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಪರಿಶೀಲನೆ, ಸಾಂಖ್ಯಿಕ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆಗಳ ವಿಸ್ತೀರ್ಣ ವರದಿ ಕಾರ್ಯದಲ್ಲಿ, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ, ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮೂಲಕ ಬೆಳೆ ಸಾಲ ನೀಡಲು ಅನುಕೂಲವಾಗಿದೆ.
ಸ್ವತಃ ರೈತರೇ ಮೊಬೈಲ್‌ಗಳಲ್ಲಿ ಆ್ಯಪ್ ಅನ್ನು ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಬೆಳೆ ಮಾಹಿತಿ ದಾಖಲಿಸಬಹುದಾಗಿದೆ.


ಸಮೀಕ್ಷೆ ಹೇಗೆ?
ಆ್ಯಪ್‌ನಲ್ಲಿ ಇ-ಕೆವೈಸಿ ಮೂಲಕ ಆಧಾರ್ ದೃಢೀಕರಿಸಲು ಆಧಾರ್ ಸಂಖ್ಯೆ ನಮೂದಿಸಬೇಕು. ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ದಾಖಲಿಸಿ ಸಕ್ರಿಯಗೊಳಿಸಬೇಕು. ್ರೂಟ್ಸ್ ತಂತ್ರಾಂಶಕ್ಕೆ ಸಂಪರ್ಕಗೊಂಡಿದ್ದ ರೈತರ ಗುರುತಿನ ಸಂಖ್ಯೆಯಡಿ ಪಹಣಿ ನಂಬರ್, ಹೆಸರು ಮತ್ತಿತರ ಅಗತ್ಯ ಮಾಹಿತಿಗಳನ್ನಯ ದಾಖಲಿಸಬೇಕು. ಪಾಲಿಗಾನ್ ಹಾಗೂ ಜಿಐಎಸ್ ಮ್ಯಾಪ್ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಿ ಎಲ್ಲ ಸರ್ವೇ ನಂಬರ್‌ಗಳ ಮಾಹಿತಿ ಅಪ್‌ಡೇಟ್ ಆಗುತ್ತದೆ. ಜಿಲ್ಲೆಯ ಎಲ್ಲ ರೈತರು ಬೆಳೆ ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಒಂದು ವೇಳೆ ಗೊಂದಲ ಉಂಟಾದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮತ್ತು ಸಾಂಖ್ಯಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net