ಸಕಲೇಶಪುರ ಕಾಫಿ ಬೆಳೆಗಾರರಲ್ಲಿ ಆತಂಕ

ಸಕಲೇಶಪುರ ಕಾಫಿ ಬೆಳೆಗಾರರಲ್ಲಿ ಆತಂಕ
Published on

ಕಾಂತರಾಜ್ ಹೊನ್ನೆಕೋಡಿ ಸಕಲೇಶಪುರ

ಕಾಫಿ ದರದಲ್ಲಿ ಭಾರಿ ಪ್ರಮಾಣದ ಇಳಿಕೆಯಿಂದ ತಾಲೂಕಿನ ಕಾಫಿ ಬೆಳೆಗಾರರು ಆತಂಕಗೊಂಡಿದ್ದಾರೆ.

ಹೌದು... ಸದ್ಯ ಕಾಫಿ ಮಾರುಕಟ್ಟೆ ಒಂದು ವರ್ಷದ ಹಿಂದಕ್ಕೆ ತಳ್ಳಲ್ಪಟ್ಟಿರುವುದು ಕಾಫಿ ಬಿಕರಿ ಮಾಡದೆ ಇಟ್ಟಿರುವ ಬೆಳೆಗಾರರ ನಿದ್ರೆ ಹಾರಿಹೋಗುವಂತೆ ಮಾಡಿದೆ.

ಏಪ್ರಿಲ್ ಅಂತ್ಯದಲ್ಲಿ ಮಾರುಕಟ್ಟೆ ಕುಸಿತವಾಗಿತ್ತಾದರೂ ನಂತರದ ದಿನಗಳಲ್ಲಿ ಅಲ್ಪ ಏರಿಕೆ ದಾಖಲಿಸಿ ಸ್ಥಿರತೆ ಕಾಯ್ದುಕೊಂಡಿದ್ದ ಧಾರಣೆ ಮೇ ಎರಡನೇ ವಾರದಿಂದ ಮತ್ತೆ ನಿರಂತರ ಕುಸಿತ ಕಾಣುತ್ತಿದ್ದು, 2024 ಮೇ ತಿಂಗಳಿನಲ್ಲಿ ಇದ್ದ ಧಾರಣೆಗೆ ಇಂದಿನ ಧಾರಣೆ ತಲುಪಿದೆ. ಪ್ರಸಕ್ತ ವರ್ಷದ ಮಾರುಕಟ್ಟೆ ಆರಂಭವಾದ ಡಿಸೆಂಬರ್‌ನಲ್ಲಿ ರೊಬಸ್ಟಾ ಚೆರ‌್ರಿ ಧಾರಣೆ 11 ಸಾವಿರ ರೂ.ಗಳಿದ್ದರೆ ಮಾರ್ಚ್ ಅಂತ್ಯಕ್ಕೆ ಸರ್ವ ಕಾಲಿಕ ಬೆಲೆ ದಾಖಲಿಸಿದ್ದು, 27ರಿಂದ 28ರ ಗುಣಮಟ್ಟ ಇದ್ದ 50 ಕೆ.ಜಿ ಕಾಫಿ 13,500 ರೂ. ಗಳಿಂದ 14,000 ಸಾವಿರ ರೂ.ಗಳಿಗೆ ಮಾರಾಟವಾಗಿತ್ತು. ಆದರೆ ಮಾರುಕಟ್ಟೆ ವಿಶ್ಲೇಷಕರು ಹಾಗೂ ಹಿಂದಿನ ವರ್ಷದ ಕಹಿ ಅನುಭವದ ಆಧಾರದಿಂದಾಗಿ ಶೇ.50ರಷ್ಟು ಕಾಫಿ ಬೆಳೆಗಾರರ ಕಾಫಿ ಬಿಕರಿ ಮಾಡದೆ ಮತ್ತಷ್ಟು ಬೆಲೆಯ ನಿರೀಕ್ಷೆಯಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಆದರೆ ಸದ್ಯದ ಮಾರುಕಟ್ಟೆ ಸ್ಥಿತಿ ಬಾರಿ ನಷ್ಟದ ದಾರಿಯೆಡೆಗೆ ಸಾಗುವಂತೆ ಮಾಡಿದೆ.

ಸದ್ಯ 27, 28 ಓಟಿ(ಔಟ್-ಟನ್) ಇರುವ ರೊಬಸ್ಟಾ ಚರಿ ಕಾಫಿ ಧಾರಣೆ 11ರಿಂದ 11,500 ರೂ.ಗಳಾಗಿದ್ದರೆ 22ರಿಂದ 25 ಓಟಿ ಇರುವ ಕಾಫಿ ಧಾರಣೆ 10 ಸಾವಿರ ರೂ.ಗಳಿಂದ 10,500 ರೂ. ಗಳಾಗಿದ್ದು, ಕೇವಲ ಒಂದು ತಿಂಗಳ ಅವಧಿಯಲ್ಲಿ ಪ್ರತಿ ಮೂಟೆ ಕಾಫಿ ಧಾರಣೆ 3ರಿಂದ 4 ಸಾವಿರದಷ್ಟು ಕುಸಿತ ಕಂಡಿರುವುದು ಬೆಳೆಗಾರರ ಆತಂಕಕ್ಕೀಡಾಗುವಂತೆ ಮಾಡಿದೆ. ರೊಬಸ್ಟಾ ಕಾಫಿ ಮಾತ್ರವಲ್ಲದೆ ಅರೇಬಿಕಾ ಕಾಫಿ ಸಹ ಇಳಿಕೆ ಹಾದಿ ಹಿಡಿದಿದೆ. ಏಪ್ರಿಲ್ ಆರಂಭದಲ್ಲಿ 16,500 ರೂ.ಗಳಿದ್ದ ಬೆಲೆ 17,000 ಸಾವಿರ ರೂ.ಗಳಿದ್ದ ಅರೇಬಿಕಾ ಚೆರ‌್ರಿ ಧಾರಣೆ ಸಹ 14, 000 ಸಾವಿರ ರೂ.ಗೂ ಕುಸಿದಿದ್ದರೆ, ರೊಬಸ್ಟಾ ಪಾರ್ಚಮೆಂಟ್ ಹಾಗೂ ಅರೇಬಿಕಾ ಪಾರ್ಚಮೆಂಟ್ ಧಾರಣೆ ಸಹ ಬಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಮಾರ್ಚ್ ಅಂತ್ಯದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇ.ಪಿ ಧಾರಣೆ 502 ರೂ.ಗಳಿದ್ದರೆ ಸದ್ಯ 430 ರೂ.ಗೂ ಕುಸಿದಿದ್ದು, ಕಳೆದೊಂದು ವಾರದಿಂದ ನಿರಂತರ ಇಳಿಕೆ ದಾಖಲಿಸುತ್ತಿದೆ.

ಮಾರುಕಟ್ಟೆ ಸ್ಥಗಿತ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿತ್ಯ 5 ರಿಂದ 10 ಡಾಲರ್ ಧಾರಣೆ ಕುಸಿತಗೊಳ್ಳುತ್ತಿದ್ದರೆ, ಸ್ಥಳೀಯ ಮಾರುಕಟ್ಟೆಯಲ್ಲಿ 100 ರಿಂದ 200 ರೂ. ಕುಸಿತಗೊಳ್ಳುತ್ತಿದೆ. ಮಾರುಕಟ್ಟೆಯ ಈ ಸ್ಥಿತಿಯನ್ನು ಗಮನಿಸುತ್ತಿರುವ ಸಾಕಷ್ಟು ಬೆಳೆಗಾರರು ಕಾಫಿ ನಷ್ಟ ಸಂಭವಿಸುವುದನ್ನು ತಪ್ಪಿಸಲು ಮಾರಾಟಕ್ಕೆ ಮನಸ್ಸು ಮಾಡಿದ್ದಾರೆ. ಆದರೆ ಸ್ಥಳೀಯ ಸಾಕಷ್ಟು ವ್ಯಾಪಾರಿಗಳು ಕಾಫಿ ಖರೀದಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಬೆಳೆಗಾರರು ಸಿದ್ಧ್ದರಿದ್ದರೂ ಮಾರಾಟ ಮಾಡಲು ಅವಕಾಶವೇ ಇಲ್ಲದಂತಾಗಿದೆ.

ಕುಸಿತಕ್ಕೆ ಕಾರಣಗಳು: ಕಾಫಿ ಧಾರಣೆ ಭಾರಿ ಏರಿಕೆ ರಪ್ತುದಾರರ ಮೇಲೆ ಪರಿಣಾಮ ಬೀರಿದ್ದು ಹತ್ತಾರು ಸಾವಿರ ಚೀಲ ಕಾಫಿ ರಪ್ತು ಮಾಡುತಿದ್ದ ರಪ್ತುದಾರರು ಬೆಲೆ ಏರಿಕೆಯಿಂದಾಗಿ ಅತ್ಯಂತ ಕಡಿಮೆ ಪ್ರಮಾಣದ ಕಾಫಿ ರಪ್ತು ಮಾಡುತ್ತಿದ್ದಾರೆ. ಇದು ಸಹ ಬೆಲೆ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ. ಅಲ್ಲದೆ ವಿಶ್ವದಲ್ಲೇ ಅತಿ ಹೆಚ್ಚು ಕಾಫಿ ಬೆಳೆಯುವ ಬ್ರೆಜಿಲ್, ಇಂಡೋನೇಷಿಯಾ ರಾಷ್ಟ್ರಗಳಲ್ಲಿ ಸದ್ಯ ಕಾಫಿ ಕೊಯ್ಲು ಆರಂಭವಾಗಿರುವುದು ದರ ಕುಸಿತಕ್ಕೆ ಕಾರಣ ಎಂಬ ಮಾತಿದೆ. ಅಲ್ಲದೆ ಕಾಫಿ ಮಂಡಳಿ ವರದಿ ಪ್ರಕಾರ ರೊಬಸ್ಟಾ ಕಾಫಿ ಇಳುವರಿ ಈ ಬಾರಿ ಕಳೆದ ಐದು ವರ್ಷಗಳಲ್ಲೇ ಹೆಚ್ಚಿದೆ ಎಂಬ ಅಂಕಿ ಅಂಶ ಸಹ ಬೆಲೆ ಇಳಿಕೆ ಕಾರಣ ಎನ್ನಲಾಗುತ್ತಿದೆ.

ಕಾಳು ಮೆಣಸಿನ ಧಾರಣೆಯು ಕುಸಿತ: ಈ ಬಾರಿ ಮೆಣಸಿನ ಇಳುವರಿಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.30 ರಷ್ಟು ಮಾತ್ರವೇ ಇಳುವರಿ ದಾಖಲಾಗಿದೆ ಎನ್ನಲಾಗುತ್ತಿದೆ. ಇದರಿಂದಾಗಿ ಈ ಬಾರಿ ಮೆಣಸಿನ ಧಾರಣೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬ ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಗೆ ತಕ್ಕಂತೆ ಕೇವಲ ಒಂದು ತಿಂಗಳ ಅವಧಿಯಲ್ಲಿ ನೂರು ರೂ. ಏರಿಕೆ ಕಾಣುವ ಮೂಲಕ ಪ್ರತಿ ಕೆ.ಜಿ ಮೆಣಸಿನ ಧಾರಣೆ ಮಾರ್ಚ್ ನಲ್ಲಿ 750 ರೂ.ಗಳಿಗೆ ತಲುಪಿತ್ತು. ಆದರೆ ಮೆಣಸಿನ ಧಾರಣೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಸಾಕಷ್ಟು ಬೆಳೆಗಾರರು ತಮ್ಮ ಫಸಲನ್ನು ಬಿಕರಿ ಮಾಡದೆ ಇಟ್ಟರೆ ಸಾಕಷ್ಟು ವ್ಯಾಪಾರಸ್ಥರು 750 ರೂ. ದರದಲ್ಲೇ ಕೊಂಡು ಸಂಗ್ರಹಿಸಿದ್ದಾರೆ. ಆದರೆ ಬೆಳೆಗಾರರು ಹಾಗೂ ವ್ಯಾಪಾರಸ್ಥರ ನಿರೀಕ್ಷೆಯನ್ನು ಮಾರುಕಟ್ಟೆ ಹುಸಿ ಮಾಡಿದ್ದು, ಕಳೆದ ಒಂದು ತಿಂಗಳಿನಿಂದ ನಿಧಾನಗತಿಯಲ್ಲಿ ಇಳಿಕೆ ಹಾದಿ ಹಿಡಿದಿರುವ ಕರಿಮೆಣಸಿನ ಧಾರಣೆ ಸದ್ಯ 650 ರೂ.ಗೆ ತಲುಪಿದೆ. ಇದರಿಂದಾಗಿ ಕೊಂಡಿಟ್ಟ ಸಾಕಷ್ಟು ಬೆಳೆಗಾರರು ಲಕ್ಷಾಂತರ ರೂ. ನಷ್ಟ ಹೊಂದುವಂತಾಗಿದೆ.

ಹಸಿಮೆಣಸಿನ ಕಾಯಿ ಬೆಲೆಯೂ ಇಳಿಕೆ: ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಸಾಕಷ್ಟು ಬೆಳೆಗಾರರು ಬೇಸಿಗೆ ಬೆಳೆಯಾಗಿ ಹಸಿಮೆಣಸಿನ ಕಾಯಿ ಬೆಳೆಯುವುದು ವಾಡಿಕೆ. ಸದ್ಯ ಫೆೆಬ್ರವರಿ ಅಂತ್ಯದಿಂದ ಆರಂಭವಾಗುವ ಹಸಿಮೆಣಸಿನ ಕಾಯಿ ಫಸಲು ಮೇ ಅಂತ್ಯದವರೆಗೂ ನಿರಂತರವಾಗಿರಲಿದೆ. ಹಸಿಮೆಣಸಿನ ಕಾಯಿ ಫಸಲು ಆರಂಭವಾದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಪ್ರತಿ ಕೆ.ಜಿ ಧಾರಣೆ 40 ರಿಂದ 60 ರೂ.ಗೆ ಮಾರಾಟವಾದರೆ ಏಪ್ರಿಲ್ ಅಂತ್ಯದಿಂದ ಧಾರಣೆ ಸಹ ಇಳಿಕೆ ಹಾದಿ ಹಿಡಿದಿದ್ದು ಸದ್ಯ ಪ್ರತಿ ಕೆ.ಜಿಗೆ 7 ರಿಂದ 15 ರೂ.ಗಳಾಗಿದೆ. ಕೊಯ್ಲು ನಡೆಸಿದ ಹಣವು ದಕ್ಕುತ್ತಿಲ್ಲ. ಆದ್ದರಿಂದ ಕೊಯ್ಲು ನಡೆಸುವುದನ್ನೇ ಬಿಟ್ಟಿದ್ದೇವೆ ಎನ್ನುತ್ತಾರೆ ಹಸಿಮೆಣಸಿನ ಕಾಯಿ ಬೆಳೆಗಾರರತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net