

ಹೇಮನಾಥ್ ಪಡುಬಿದ್ರಿ
ಎಲ್ಲೂರು ಗ್ರಾಮದ ಕೆಮುಡೇಲಿನಲ್ಲಿ ಹಾದುಹೋಗಿರುವ ಲೋಕೋಪಯೋಗಿ ಇಲಾಖೆ ಬದಿ ಶತಮಾನ ಕಂಡ ದೇವದಾರ ಮರ ಅಪಾಯಕಾರಿಯಾಗಿ ಬೆಳೆದು ನಿತ್ಯ ಸಂಚಾರಿಗಳು, ಪರಿಸರದ ಜನತೆಯ ಆತಂಕಕ್ಕೆ ಕಾರಣವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳ್‌ನಿಂದ ಅದಮಾರು ಮೂಲಕ ಸಾಗಿ ಮುದರಂಗಡಿ ಸಂಪರ್ಕಿಸುವ ಲೋಕೋಪಯೋಗಿ ಇಲಾಖೆ ರಸ್ತೆಯಂಚಿನ ಈ ದೇವದಾರ ಮರ ಶತಮಾನ ಕಂಡಿದ್ದು, ಬೇಸಿಗೆಯಲ್ಲಿ ಪರಿಸರಕ್ಕೆ ತಂಪೆರೆಯುತ್ತಿದೆ. ಆದರೆ ವಿಶಾಲವಾಗಿ ಹರಡಿರುವ ಮರದ ಕೊಂಬೆಗಳು ಸಮೀಪದಲ್ಲಿಯೇ ಇರುವ ಮನೆ, ವಾಣಿಜ್ಯ ಮಳಿಗೆ ಕಟ್ಟಡ ಹಾಗೂ ನಿತ್ಯ ಸಂಚರಿಸುತ್ತಿರುವ ಜನತೆ ಹಾಗೂ ವಾಹನ ಸವಾರರಿಗೆ ಮಳೆಗಾಲದಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆಯಿದೆ.
ಮರದಡಿಯಲ್ಲಿಯೇ ವಾಣಿಜ್ಯ ಮಳಿಗೆಗಳಿವೆ. ನೂರಾರು ಜನರು ಅತ್ತಿಂದಿತ್ತ ಸಂಚರಿಸುತ್ತಿರುವ ಈ ಪ್ರದೇಶದಲ್ಲಿ ಮಳೆಗಾಗಾಲದಲ್ಲಿ ಜೀವಭಯದಲ್ಲಿ ಓಡಾಡುವಂತಾಗಿದೆ. ಶಾಲಾ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಂತೂ ತುಂಬಾ ಆತಂಕಿತರಾಗಿದ್ದಾರೆ. ಈ ರೀತಿ ಅಪಾಯಕಾರಿಯಾಗಿ ಸುತ್ತಮುತ್ತ ಕೊಂಬೆಗಳು ಹರಡಿದ್ದರೂ, ಮೆಸ್ಕಾಂ, ಲೋಕೋಪಯೋಗಿ ಹಾಗೂ ಅರಣ್ಯ ಇಲಾಖೆಯಾಗಲಿ ಈ ಬಗ್ಗೆ ಗಮನಹರಿಸಿದಂತಿಲ್ಲ.
ಒಂದು ಮರ ತೆರವಾದರೆ ಹತ್ತು ಗಿಡ ನೆಡಬಹುದು. ಆದರೆ ಒಂದು ಜೀವ ಹೋದರೆ ಮತ್ತೆ ಬರಲು ಸಾಧ್ಯವೇ? ದಿನನಿತ್ಯ ನೂರಾರು ಜನ ಹಾಗೂ ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿನ ದೇವದಾರ ಮರ ತೀರಾ ಅಪಾಯಕಾರಿಯಾಗಿದ್ದು, ಒಂದಿಲ್ಲೊಂದು ದಿನ ಅನಾಹುತಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ.-ರಂಜಿತ್ ಕೆ.ಎಸ್. ಜಂತ್ರ, ವಿದ್ಯಾರ್ಥಿಗಳ ಪಾಲಕ
ಸುತ್ತಮುತ್ತ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಮರದ ಗೆಲ್ಲುಗಳು ತೀರಾ ಅಪಾಯಕಾರಿಯಾಗಿವೆ. ಹಿಂದೊಮ್ಮೆ ಮರದ ಗೆಲ್ಲುಗಳನ್ನು ತೆರವುಗೊಳಿಸಿದ್ದು, ಇದೀಗ ಮತ್ತಷ್ಟು ವಿಶಾಲಾಗಿ ಗೆಲ್ಲುಗಳು ಬೆಳೆದು ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಸಣ್ಣಪುಟ್ಟ ಒಣಗಿದ ಗೆಲ್ಲುಗಳು ಬಿದ್ದು ತೊಂದರೆಯಾಗಿದ್ದು ಇದೆ. ಸಂಬಂಧಿಸಿದ ಇಲಾಖೆಗಳು ಈ ಬಗ್ಗೆ ತುರ್ತಾಗಿ ಸ್ಪಂದಿಸುವ ಅಗತ್ಯವಿದೆ.-ಜಗದೀಶ್ ಕೆಮುಂಡೇಲು
ಅಪಾಯಕಾರಿ ಮರವಿರುವ ಬಗ್ಗೆ ಗ್ರಾಪಂಗೆ ಈವರೆಗೆ ಮಾಹಿತಿ ಬಂದಿಲ್ಲ. ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ತೆರವಿಗೆ ಕ್ರಮವಹಿಸಲಾಗುವುದು. ಈ ರಸ್ತೆಯಲ್ಲಿನ ಚರಂಡಿ ಹೂಳೆತ್ತುವ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮವಹಿಸಿಲ್ಲ.-ರವಿರಾಜ ರಾವ್, ಎಲ್ಲೂರು ಗ್ರಾಪಂ ಅಧ್ಯಕ್ಷ