

ಪಾಂಡವಪುರ: ತಾಲೂಕಿನ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಅನು ತಂಡದ ಸದಸ್ಯರು ಉಚಿತವಾಗಿ ಸುಣ್ಣ-ಬಣ್ಣ ಬಳಿದು ಶಾಲೆಯ ಗೋಡೆಯ ಮೇಲೆ ಕಲಾಕೃತಿ ಬಿಡಿಸಿದರು.
ಗ್ರಾಮದ ಸರ್ಕಾರಿ ಶಾಲೆ ಹಲವು ವರ್ಷಗಳಿಂದ ಸುಣ್ಣ-ಬಣ್ಣ ಇಲ್ಲದ ಕಟ್ಟಡಕ್ಕೆ ಬಣ್ಣ ಬಳಿದಿದ್ದಾರೆ. ಬಣ್ಣ ಬಳಿಯುವುದಕ್ಕೂ ಮೊದಲು ಶಾಲೆಯ ಕಟ್ಟಡ ಪಾಚಿ, ಧೂಳಿನಿಂದ ಆವೃತವಾಗಿತ್ತು. ಶಿಕ್ಷಕರ ಮನವಿ ಮೇರೆಗೆ ಏಳು ಜನರ ತಂಡ ಆಗಮಿಸಿ ಸತತ ನಾಲ್ಕು ದಿನಗಳ ಕಾಲ ಸ್ವಚ್ಛಗೊಳಿಸಿ ಶಾಲೆಯನ್ನು ಶೃಂಗರಿಸಿದ್ದಾರೆ.
ತಂಡದ ಮುಖ್ಯಸ್ಥೆ ಅನು ಮಾಧ್ಯಮದವರೊಂದಿಗೆ ಮಾತನಾಡಿ, ಕನ್ನಡ ನಾಡು, ನುಡಿ, ಭಾಷೆ ಉಳಿಯಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಬೇಕು. ಬಡವರ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ, ಸುಣ್ಣ-ಬಣ್ಣ ಕಾಣದ ಆಯ್ದ ಶಾಲೆಗಳಿಗೆ ನಮ್ಮ ತಂಡ ಬಣ್ಣ ಬಳಿಯುವ ಸೇವೆ ಮಾಡುತ್ತಿದ್ದೇವೆ. ಕಳೆದ ನಾಲ್ಕೈದು ವರ್ಷಗಳಲ್ಲಿ ರಾಜ್ಯದ 23 ಜಿಲ್ಲೆಗಳಲ್ಲಿ ಸುಮಾರು 121ಶಾಲೆಗಳಿಗೆ ಬಣ್ಣ ಬಳಿದಿದ್ದೇವೆ. ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿಯ ಈ ಶಾಲೆ 121 ಶಾಲೆಯಾಗಿದೆ ಎಂದರು.
ಮಂಡ್ಯ ಜಿಲ್ಲೆಯ ಜನ ತುಂಬ ಹೃದಯವಂತರು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆ, ತಾಲೂಕುಗಳ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಸೇವೆ ಮಾಡಿದ್ದೇವೆ. ಆದರೆ, ಮಂಡ್ಯದ ಜನ ತೋರಿಸುತ್ತಿರುವ ಪ್ರೀತಿ, ವಿಶ್ವಾಸ ಎಲ್ಲೂ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಎರಡು ತಿಂಗಳು ಕಾಲ ವಾಸ್ತವ್ಯ ಹೂಡಿ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಬೇಕೆಂಬ ಉದ್ದೇಶ ಇದೆ. ಇದಕ್ಕೆ ಸಹಕಾರ ಸಿಕ್ಕರೆ ಇದ್ದು ಕೈಲಾದ ಸೇವೆ ಸಲ್ಲಿಸುತ್ತೇವೆ.
ಶಾಲೆಗೆ ಬಣ್ಣ ಬಳಿಯುವ ಸೇವೆಯಿಂದ ಲಕ್ಷಾಂತರ ರೂ.ಸಾಲ ಮಾಡಿದ್ದೇನೆ. ಆದರೆ ಈ ಸೇವೆ ಮನಸ್ಸಿಗೆ ನೆಮ್ಮದಿ ಕೊಡುತ್ತಿರುವ ಕಾರಣ ಈ ಸೇವೆ ಮಾಡುತ್ತಿದ್ದೇನೆ, ಕೆಲವು ಕಡೆ ನಾವು ಉಚಿತವಾಗಿ ಬಣ್ಣ ಬಳಿದಿದ್ದಕ್ಕೂ ಕೆಲವರು ನಾವು ಬಣ್ಣ ಬಳಿಸಿದ್ದೇವೆ ಎಂದು ಬಿಲ್ ಮಾಡಿಕೊಂಡಿರುವ ಉದಾಹರಣೆಗಳಿವೆ. ಇದು ಮನಸ್ಸಿಗೆ ನೋವುಂಟು ಮಾಡಿದೆ. ಸದ್ಯ ಈ ಸೇವೆಯನ್ನು ಇನ್ನೂ ಒಂದು ವರ್ಷಗಳ ಮುಂದುವರಿಸುತ್ತೇವೆ. ಆನಂತರ ವೈಯಕ್ತಿಕ ಬದುಕಿನ ಕಡೆ ಗಮನ ಕೊಡುತ್ತೇನೆ ಎಂದರು.