ಅಂತ್ರೋಳ್ಳಿ ಯುವಕ ಚಾಂಪಿಯನ್

23HLY-1
Published on

ಹಳಿಯಾಳ: ಅಂತ್ರೋಳ್ಳಿ ಗ್ರಾಮದ ಯುವಕ ಉಮೇಶ ವಡ್ಡರ ಜಾಗತಿಕವಾಗಿ ಗುರುತಿಸುವ ಸಾಧನೆ ಮಾಡಿದ್ದಾರೆ. ಟೊಯೋಟಾ ಮೋಟಾರ್ಸ್ ವತಿಯಿಂದ ಕತಾರ್​ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಟೋಮೋಟಿವ್ ಪೇಂಟ್ ಟೆಕ್ನಿಷಿಯನ್ ವಿಭಾಗ ಸ್ಪರ್ಧೆಯಲ್ಲಿ ಚಾಂಪಿಯನ್ನರಾಗಿ ಹೊರಹೊಮ್ಮಿದ್ದಾರೆ.

ಡಿಸೆಂಬರ್ 21ರಂದು ಕತಾರ್​ನಲ್ಲಿ ವಾಹನಗಳಿಗೆ ಬಣ್ಣ ಹೆಚ್ಚುವ ಪೇಟಿಂಗ್ ಸ್ಪರ್ಧೆ ಜರುಗಿತು. ಇದರಲ್ಲಿ ಕತಾರ್ ರಾಷ್ಟ್ರದ ವಿವಿಧ ರಾಜ್ಯಗಳಿಂದ ಆಗಮಿಸಿದ 20 ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆದ ಉಮೇಶ ಅವರಿಗೆ ಪ್ರಶಸ್ತಿಯೊಂದಿಗೆ 4500 ರಿಯಾಲ್ ( ಅಂದಾಜು 90 ಸಾವಿರ ರೂ.) ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

ತೀರಾ ಕಡುಬಡತನ ಕುಟುಂಬದಿಂದ ಬಂದ ಉಮೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ತಂದೆ ದೇವೇಂದ್ರ ಹಾಗೂ ತಾಯಿ ಮಲ್ಲವ್ವ ಕೂಲಿನಾಲಿ ಮಾಡಿ ಮಕ್ಕಳನ್ನು ಬೆಳೆಸಿ ದ್ದಾರೆ. ಇವರ ಸಹೋದರ ಹೆಸ್ಕಾಂ ನಲ್ಲಿ ಗುತ್ತಿಗೆ ಆಧಾರ ದಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಸಹೋದರಿಯರಿದ್ದಾರೆ.

ಹಳಿಯಾಳದ ದೇಶಪಾಂಡೆ ಖಾಸಗಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಟೊಯೋಟಾ ಸಂಸ್ಥೆ ಆರಂಭಿಸಿದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಅಟೋಮೋಟೀವ್ ತರಬೇತಿ ಕೋರ್ಸ್​ಗೆ 2011-12ರಲ್ಲಿ ಉಮೇಶ ಪ್ರವೇಶ ಪಡೆದರು. ಅಂತ್ರೋಳ್ಳಿಯಿಂದ ಹಳಿಯಾಳಕ್ಕೆ ಸೈಕಲ್ ತುಳಿದು ಬರುತ್ತಿದ್ದರು. ಹಳಿಯಾಳದಲ್ಲಿ ನಡೆದ ಟೊಯೋಟಾ ಕೆರಿಯರ್ ಡೇ ಆಯ್ಕೆ ನೇಮಕಾತಿ ಪ್ರಕ್ರಿಯೆ ಮೂಲಕ ಬೆಂಗಳೂರಿನ ಪ್ರಸಿದ್ಧ ನಂದಿ ಟೊಯೋಟಾದಲ್ಲಿ ಟ್ರೈನಿ ಪೇಂಟ್ ಟೆಕ್ನಿಷಿಯನ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಿರಂತರ ಪರಿಶ್ರಮ ಹಾಗೂ ಕೌಶಲದಿಂದ ಮಾಸ್ಟರ್ ಟ್ರೈನರ್ ಆಗಿ ಪದೋನ್ನತಿ ಪಡೆದರು. 2017ರ ಜೂನ್​ನಲ್ಲಿ ನಡೆದ ದಕ್ಷಿಣ ಭಾರತದ ಟೊಯೋಟಾ ಡೀಲರ್​ಗಳ ಸಮೂಹದಲ್ಲಿ ನಡೆದ ರಿಜನಲ್ ಸ್ಕಿಲ್ ಕಾಂಪಿಟೇಶನ್​ನಲ್ಲಿ ಮೂರನೇ ಸ್ಥಾನ ಪಡೆದರು. ಅಲ್ಲದೆ, ಸಂಸ್ಥೆಯ ಅತ್ಯುತ್ತಮ ಪೇಂಟ್ ಟೆಕ್ನಿಷಿಯನ್ ಎಂಬ ಬಿರುದಿಗೆ ಪಾತ್ರರಾದರು. 2018ರಲ್ಲಿ ಪಶ್ಚಿಮ ಏಷ್ಯಾದ ಅರೇಬಿಯಾದ ದ್ವೀಪ ರಾಷ್ಟ್ರ ಕತಾರ್​ನ ಪ್ರಸಿದ್ಧ ಟೊಯೋಟಾ ಡೀಲರ್ ಅಬ್ದುಲ್ಲಾ ಅಬ್ದುಲ್ಲಾ ಘನಿ ಬ್ರದರ್ಸ್ ಕಂಪನಿಗೆ ಸೇರಿದ ಉಮೇಶ, ವೃತ್ತಿ ನೈಪುಣ್ಯದಿಂದ ರಾಷ್ಟ್ರದ ಅತ್ಯುತ್ತಮ ಅಟೋಮೋಟಿವ್ ಪೇಂಟ್ ಟೆಕ್ನಿಷಿಯನ್ ಆಗಿ ಹೊರ ಹೊಮ್ಮಿದರು.

ಹಳಿಯಾಳದಲ್ಲಿ ಸ್ಥಾಪನೆಗೊಂಡ ದೇಶಪಾಂಡೆ ಖಾಸಗಿ ಕೈಗಾರಿಕೆ ತರಬೇತಿ ಕೇಂದ್ರವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ತರಬೇತಿ ಸಂಸ್ಥೆಯಾಗಿ ಹೆಸರು ಮಾಡುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಸಾಧನೆ ಮಾಡುತ್ತಿರುವುದು ಸಂಸ್ಥೆ ಮತ್ತು ತಾಲೂಕಿಗೆ ಗೌರವದ ವಿಷಯವಾಗಿದೆ. | ದಿನೇಶ ಆರ್. ನಾಯ್ಕ

ಡಿಪಿಐಟಿಐ ಪ್ರಾಚಾರ್ಯ

ಉಮೇಶನ ಸಾಧನೆಯಿಂದ ನಮ್ಮ ಕುಟುಂಬಕ್ಕೂ ಹಳ್ಳಿಗೂ ಗೌರವ ಬಂದಿದೆ. ಅವನ ಪರಿಶ್ರಮದಿಂದಾಗಿ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ.| ಮಹೇಶ ವಡ್ಡರ (ಉಮೇಶ ಸಹೋದರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net